ಗದ್ದೆಯ ಅಂಚಿನ ಮಣ್ಣಿನ ಗೂಡಿನಲ್ಲಿ ಡೊಂಗ್ರಿ ಕಪ್ಪೆ ತನ್ನೆರಡು ಮರಿಗಳೊಂದಿಗೆ ವಾಸವಾಗಿತ್ತು. ಜಗಳಗಂಟಿಯಾದ ಡೊಂಗ್ರಿ ಕಪ್ಪೆಗೆ ಮಾತು ಜೋರು. ಸದಾ ವಟರ್ ವಟರ್ ಅನ್ನುತ್ತಿತ್ತು. ತನ್ನ ಮನೆ ಕಡೆ ಯಾರಾದರೂ ಬಂದರೆ, ತನ್ನ ವಿಷಯವನ್ನು ಯಾರಾದರೂ ಮಾತಾಡಿದರೆ ಅದು ಜಗಳಕ್ಕೆ ನಿಂತು ಅವರನ್ನು ಅಲ್ಲಿಂದ ಓಡಿಸುತ್ತಿತ್ತು. ಮತ್ತೆಂದೂ ಬರದ ಹಾಗೆ ಬಯ್ದು ಕಳಿಸುತ್ತಿತ್ತು. ಆದ್ದರಿಂದಲೇ ಡೊಂಗ್ರಿಯ ಗೆಳೆತನ ಯಾರೂ ಮಾಡುತ್ತಿರಲಿಲ್ಲ. ಒಂದು ಮುಂಜಾನೆ ಡೊಂಗ್ರಿ ಕಪ್ಪೆ ತನ್ನ ಪುಟ್ಟ ಮರಿಗಳೊಂದಿಗೆ ತನ್ನ ಗೂಡಿನ ಪಕ್ಕ ಚಿಕ್ಕ ಕಲ್ಲಿನ ಮೇಲೆ ಕುಳಿತಿತ್ತು. ಅದು ಮರಿಗಳಿಗೆ ನೀರಿಗೆ ಹಾರುವುದನ್ನು, ಈಜುವುದನ್ನು ಕಲಿಸಲು ಕುಳಿತಿತ್ತು. ಡೊಂಗ್ರಿ ಕಪ್ಪೆ ಕಣ್ಣನ್ನು ಅರ್ಧ ಮುಚ್ಚಿ, ಮುಖದ ಮೇಲೆ ನಗುವಿಲ್ಲದೆ ಕುಳಿತಿತ್ತು. ಕಪ್ಪೆ ಮರಿಗಳು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಸುತ್ತಲ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದವು. ಆಗ ತಾನೇ ಬೆಳಗಾಗುತ್ತಿತ್ತು. ಸೂರ್ಯನ ಬಿಸಿಲಿಗೆ ಗದ್ದೆಯ ಬದುವಿನಲ್ಲಿದ್ದ ಹುಲ್ಲಿನ ಮೇಲೆ ಮಂಜಿನ ಹನಿಗಳು ಹೊಳೆಯುತ್ತಿದ್ದವು. ಆಗಸದಲ್ಲಿ ಮೋಡಗಳು ತೇಲಾಡುತ್ತಿದ್ದವು. ಸುತ್ತಲೂ ಇಬ್ಬನಿ ಮುಸುಕಿತ್ತು. ಅಮ್ಮನ ಜೊತೆ ಕೂತಿದ್ದ ಮರಿಗಳಿಗೆ ಇದನ್ನೆಲ್ಲಾ ನೋಡುತ್ತಾ ಖುಷಿಯಾಯಿತು. ಒಂದು ಮರಿ ಅಮ್ಮನಲ್ಲಿ ಹೇಳಿತು. ಮರಿ: ಅಹಾ ಅಮ್ಮ. ಈ ಪರಿಸರ ಎಷ್ಟು ಸುಂದರವಾಗಿದೆ. ನೋಡಿದರೆ ನೋಡ್ತಾನೇ ಇರೋಣ...