ಗದ್ದೆಯ ಅಂಚಿನ ಮಣ್ಣಿನ ಗೂಡಿನಲ್ಲಿ ಡೊಂಗ್ರಿ ಕಪ್ಪೆ ತನ್ನೆರಡು ಮರಿಗಳೊಂದಿಗೆ ವಾಸವಾಗಿತ್ತು. ಜಗಳಗಂಟಿಯಾದ ಡೊಂಗ್ರಿ ಕಪ್ಪೆಗೆ ಮಾತು ಜೋರು.  ಸದಾ ವಟರ್ ವಟರ್ ಅನ್ನುತ್ತಿತ್ತು. ತನ್ನ ಮನೆ ಕಡೆ ಯಾರಾದರೂ ಬಂದರೆ, ತನ್ನ ವಿಷಯವನ್ನು ಯಾರಾದರೂ ಮಾತಾಡಿದರೆ ಅದು ಜಗಳಕ್ಕೆ ನಿಂತು ಅವರನ್ನು ಅಲ್ಲಿಂದ ಓಡಿಸುತ್ತಿತ್ತು.‌ ಮತ್ತೆಂದೂ ಬರದ ಹಾಗೆ ಬಯ್ದು ಕಳಿಸುತ್ತಿತ್ತು. ಆದ್ದರಿಂದಲೇ ಡೊಂಗ್ರಿಯ ಗೆಳೆತನ‌ ಯಾರೂ ಮಾಡುತ್ತಿರಲಿಲ್ಲ.


ಒಂದು ಮುಂಜಾನೆ ಡೊಂಗ್ರಿ ಕಪ್ಪೆ ತನ್ನ ಪುಟ್ಟ ಮರಿಗಳೊಂದಿಗೆ ತನ್ನ‌ ಗೂಡಿನ‌ ಪಕ್ಕ ಚಿಕ್ಕ ಕಲ್ಲಿನ ಮೇಲೆ ಕುಳಿತಿತ್ತು. ಅದು ಮರಿಗಳಿಗೆ ನೀರಿಗೆ ಹಾರುವುದನ್ನು, ಈಜುವುದನ್ನು ಕಲಿಸಲು ಕುಳಿತಿತ್ತು. ಡೊಂಗ್ರಿ ಕಪ್ಪೆ ಕಣ್ಣನ್ನು ಅರ್ಧ ಮುಚ್ಚಿ, ಮುಖದ ಮೇಲೆ ನಗುವಿಲ್ಲದೆ ಕುಳಿತಿತ್ತು. ಕಪ್ಪೆ ಮರಿಗಳು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಸುತ್ತಲ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದವು. ಆಗ ತಾನೇ ಬೆಳಗಾಗುತ್ತಿತ್ತು. ಸೂರ್ಯನ‌ ಬಿಸಿಲಿಗೆ ಗದ್ದೆಯ ಬದುವಿನಲ್ಲಿದ್ದ ಹುಲ್ಲಿನ ಮೇಲೆ ಮಂಜಿನ‌ ಹನಿಗಳು‌ ಹೊಳೆಯುತ್ತಿದ್ದವು. ಆಗಸದಲ್ಲಿ  ಮೋಡಗಳು ತೇಲಾಡುತ್ತಿದ್ದವು. ಸುತ್ತಲೂ ಇಬ್ಬನಿ ಮುಸುಕಿತ್ತು. ಅಮ್ಮನ ಜೊತೆ ಕೂತಿದ್ದ  ಮರಿಗಳಿಗೆ ಇದನ್ನೆಲ್ಲಾ ನೋಡುತ್ತಾ ಖುಷಿಯಾಯಿತು. ಒಂದು ಮರಿ ಅಮ್ಮನಲ್ಲಿ ಹೇಳಿತು.

ಮರಿ: ಅಹಾ ಅಮ್ಮ.‌ ಈ ಪರಿಸರ ಎಷ್ಟು‌ ಸುಂದರವಾಗಿದೆ. ನೋಡಿದರೆ ನೋಡ್ತಾನೇ ಇರೋಣ ಅನ್ನಿಸ್ತದೆ. 

ಡೊಂಗ್ರಿ: ಹಾ ಹಾ. ಚಂದ ನೋಡಿದ್ದು ಸಾಕು. ಮೊದಲು ಪಾಠ ಕಲಿ. ಪ್ರಕೃತಿಯ ಚಂದ ನಾಳೆಯೂ ನೋಡಬಹುದು. ಹುಂ, ನೀರಿಗೆ ಹಾರು!

ಮರಿ: ಸರಿ ಅಮ್ಮ.

ಢುಳುಂ..!

ಮರಿ ಹಾರಿದ ರಭಸಕ್ಕೆ ಡೊಂಗ್ರಿಯ ಮೇಲೆ ನೀರು ಎರಚಿತು.

'ಥತ್!' ಅಂದಿತು ಡೊಂಗ್ರಿ.


ಒಂದು‌ ದಿನ ಡೊಂಗ್ರಿ ಗದ್ದೆ ಬದುವಿನ‌ ತನ್ನ‌ ಮನೆಯ ಬಳಿ ಕೂತಿದ್ದಾಗ ಅದಕ್ಕೆ ಗದ್ದೆಯಲ್ಲಿ ಒಂದು ಕೊಕ್ಕರೆ ಕಾಣಿಸಿತು. ಆ ಕೊಕ್ಕರೆಯ ಹೆಸರು ಗೊರವ. ಗೊರವ ಗದ್ದೆಯಲ್ಲಿ ಚಿಕ್ಕಪುಟ್ಟ ಮೀನುಗಳನ್ನು‌ ಹಿಡಿದು ತಿನ್ನುತ್ತಾ ಇತ್ತು. ಡೊಂಗ್ರಿಗೆ  ಅದನ್ನು ನೋಡಿ ಭಯವಾಯಿತು. ಈ ಕೊಕ್ಕರೆ ತನ್ನ‌ ಮರಿಗಳನ್ನೂ ತಿನ್ನಬಹುದು ಅನ್ನಿಸಿ ಭಯದ ಜೊತೆ ಕೋಪವೂ ಬಂತು. ತಕ್ಷಣ ಅದು ಗದ್ದೆಯ ಬದಿಯಲ್ಲಿ ಜಂಪಿಸುತ್ತ ಕಲ್ಲಿನ‌ ಮೇಲೆ ಬಂದು "ಟೊರ್ರಾ ಟೊರ್ರಾ ಟೊರಾಕ್" ಎಂದು ಅರಚತೊಡಗಿತು. ಕೊಕ್ಕರೆ ಕತ್ತು ತಿರುಗಿಸಿ ಸದ್ದು ಬಂದ ಕಡೆ ನೋಡಿತು. ಆಗ ಕಪ್ಪೆ,

ಎಲಾ ಭಕಪಕ್ಷಿಯೇ, ಏನ್ ಮಾಡ್ತಾ ಇದ್ದಿ ಇಲ್ಲಿ? ತೊಲಗು ಇಲ್ಲಿಂದ. ಇದು ನನ್ನ‌ ಜಾಗ.‌ ಇಲ್ಲಿ‌ ನನ್ನ‌ ಮನೆಯಿದೆ; ಮಕ್ಕಳಿದ್ದಾವೆ. ನಿನ್ನ ಕಣ್ಣು ನೋಡಿದರೆ ಕಳ್ಳನಂತೆ ಕಾಣ್ತೀಯಾ. ಕೊಕ್ಕು‌ ನೋಡಿದರೆ ನನ್ನ‌ ಮರಿಗಳನ್ನು  ಸಿಗಿದು ತಿನ್ನಲು  ಹರಿತಗೊಳಿಸಿ ಬಂದಂತೆ ಕಾಣಿಸುತ್ತಿದೆ. ಕಾಲುಗಳಲ್ಲಿ ಅಮರಿಸಿ ಹಿಡಿದರೆ ಎಂಥವನೂ ಉಸಿರುಗಟ್ಟಿ ಸಾಯಬಹುದು ಹಾಗಿವೆ ನಿನ್ನ ಕಾಲುಗಳು. ನೀನು ನನ್ನ‌ ಮಕ್ಕಳನ್ನು ಹಿಡಿದು ತಿನ್ನಲು ಹೊಂಚು ಹಾಕುತ್ತಾ ಇದ್ದೀ ಅಲ್ವ? ಹೋಗು ಇಲ್ಲಿಂದ." ಎಂದು ಬೊಬ್ಬೆ ಹಾಕಿ ಗಲಾಟೆ ಮಾಡಿತು.

ಕೊಕ್ಕರೆಗೆ ಇದರ ಅರಚಾಟ ಕೇಳಿ ಬೇಸರ ಬಂತು. ಅದು ಸಾವಧಾನದಿಂದ ಉತ್ತರಿಸಿತು.

ಕೊಕ್ಕರೆ: ಓ ಕಪ್ಪೆ, ನಾನು ನಿನ್ನ‌ ಮರಿಯನ್ನು ತಿನ್ನಲು ಬಂದಿಲ್ಲಮ್ಮ. ನಾನು ನನ್ನ ಪಾಡಿಗೆ ಆಹಾರ ಹುಡುಕ್ತಾ ಬಂದೆ. ನಾನು ನಿನ್ನ ಗೂಡಿನ ಬಳಿ ಬರುದಿಲ್ಲ. ನಿನಗೆ, ನಿನ್ನ‌ ಮಕ್ಕಳಿಗೆ ತೊಂದರೆ ಮಾಡಲ್ಲ. ಆಹಾರ ತಿಂದು ಹೋಗ್ತೇನೆ.‌ ಸ್ವಲ್ಪ ತಡ್ಕೋ. 

ಡೊಂಗ್ರಿ: ಅದೆಲ್ಲಾ ನಂಗೊತ್ತಿಲ್ಲ. ಈಗ್ಲೇ ಜಾಗ ಖಾಲಿ ಮಾಡು!

ಕೊಕ್ಕರೆ: ಜಾಗ ಖಾಲಿ‌ಮಾಡೋದಕ್ಕೆ ಇದು ನಿನ್ನ‌ ಜಾಗ ಅಲ್ಲವಲ್ಲ? 

ಆಗ ಡೊಂಗ್ರಿ ಅರಚಿತು. ಅಯ್ಯೋ, ಕೊಕ್ಕರೆ ನನ್ನ ಮಕ್ಕಳನ್ನು ಸಾಯಿಸಿ ತಿನ್ನಲು ಬಂದಿದ್ದಾನಪ್ಪೋ.. ಕಾಪಾಡಿ! 

ಇದನ್ನು ಕೇಳಿ ಕೊಕ್ಕರೆ ಅಲ್ಲಿಂದ ಹಾರಿಹೋಯಿತು. 


ಈ ಕೊಕ್ಕರೆಗೊಂದು ದನದ ಗೆಳೆತನವಾಗಿತ್ತು. ಕಪಿಲೆ ಅಂತ ಅದರ ಹೆಸರು.  ಕಪಿಲೆಗೆ ವಯಸ್ಸಾಗಿತ್ತು. ಕಣ್ಣು ಪೂರ್ತಿ ಕಾಣಿಸ್ತಾ ಇರ್ಲಿಲ್ಲ. ಆದರೂ ಅದರ ಕೈಕಾಲು ಗಟ್ಟಿ ಇತ್ತು. ಕೈಕಾಲು ಗಟ್ಟಿ ಇರುವಷ್ಟು ದಿನ‌ ತನ್ನ ಕೆಲಸ ತಾನೇ ಮಾಡಿಕೊಳ್ಳಬೇಕು ಅಂತ ಅದರ ಯೋಚನೆ. ಹಾಗಾಗಿ ಅದು ಗದ್ದೆಬಯಲಿಗೆ ಹುಲ್ಲು ಮೇಯಲು ಬರುತ್ತಿತ್ತು. ಗೊರವ ಕೊಕ್ಕರೆಗೆ ಕಪಿಲೆಯೆಂದರೆ, ಕಪಿಲೆಗೆ ಗೊರವನೆಂದರೆ ಪ್ರೀತಿ. ಗೊರವ ಬಹಳ ಸ್ನೇಹದಿಂದ ಕಪಿಲೆಯ ಬೆನ್ನ‌ಮೇಲೆ ಕೂತು ಕಪಿಲೆಯೊಂದಿಗೆ ಮಾತಾಡುತ್ತಿತ್ತು.‌ ಮಾತಾಡುತ್ತಾ ದನದ ಮೈಯಲ್ಲಿದ್ದ ತಿಗಣೆಗಳನ್ನು ಹುಡುಕಿ ತಿನ್ನುತ್ತಿತ್ತು. ಇದರಿಂದ ಕಪಿಲೆಗೂ ಕಾಟ ಕೊಡುವ ತಿಗಣೆಗಳಿಂದ ಮುಕ್ತಿ ಸಿಗುತ್ತಿತ್ತು.  ಕಪಿಲೆ ದನ ಹುಲ್ಲು ಮೇಯುವಾಗ ಆ ಹುಲ್ಲಿನಿಂದ ಕೀಟಗಳು‌ ಮೇಲೆದ್ದು ಹಾರಾಡುತ್ತವೆ. ಆ ಕೀಟಗಳನ್ನು ಹಿಡಿಯುವುದಕ್ಕೆ ಗೊರವ ಕೊಕ್ಕರೆಯೂ ಮತ್ತು  ಕೊಕ್ಕರೆಯ ಕುಟುಂಬವೇ ಬರುತ್ತಿತ್ತು. ಕಪಿಲೆ ದನ ಹುಲ್ಲು ಮೇಯುವಾಗೆಲ್ಲ ತಮಗೆ ಆಹಾರ ಸಿಗುತ್ತಿದೆ ಎಂಬ ಯೋಚನೆಯಿಂದ ಕೊಕ್ಕರೆಗಳಿಗೂ ಸಂತೋಷವಾಗುತ್ತಿತ್ತು.‌ ಹಾಗಾಗಿಯೇ ಕಪಿಲೆ ಎಂದರೆ ಅವುಗಳಿಗೂ ಇಷ್ಟವಾಗಿತ್ತು. 

ಗೊರವ: ನೋಡು ಕಪಿಲಕ್ಕ. ನಿನ್ನಿಂದಾಗಿ ನಮ್ಮ‌ವರಿಗೆಲ್ಲ ಆಹಾರ ಸಿಗುತ್ತಿದೆ. ನಮಗೆ ನಿನ್ನಿಂದ ತುಂಬ ಖುಷಿ.

ಕಪಿಲೆ: ಇದರಲ್ಲಿ ನನ್ನ ಕೆಲಸವೇನಿದೆ? ನಾನು ನನಗಾಗಿ ಹುಲ್ಲು‌ ಮೇಯುತ್ತೇನೆ. ಆಗ ಏಳುವ ಕೀಟಗಳಿಂದ ನಿಮ್ಮ ಹೊಟ್ಟೆ ತುಂಬುತ್ತದೆ. ಇದರಲ್ಲಿ ನನ್ನ ಸಾಧನೆಯೇನೂ ಇಲ್ಲ. ಈಗ, ನನ್ನ ರಕ್ತಹೀರಿ ಕಾಟ ಕೊಡುವ ಹೇನು ತಿಗಣೆಗಳನ್ನು ನೀವು ಹೆಕ್ಕಿ ತಿನ್ನುತ್ತೀರಿ. ಇದರಿಂದ ನನಗೂ ಉಪಕಾರ, ನಿಮಗೂ ಆಹಾರ. ಒಟ್ಟಿಗೆ ಬದುಕುವುದೆಂದರೆ ಇದೆ ಅಲ್ವೇ?

ಗೊರವ: ಹೌದಕ್ಕ, ಆದರೆ ಎಲ್ಲರೂ ನಿನ್ನ ಹಾಗೇ ಯೋಚಿಸಲ್ಲ. ಆ ಡೊಂಗ್ರಿ ಕಪ್ಪೆ ನೋಡು. ಮೊನ್ನೆ ನನಗೂ ಅವಳಿಗೂ ಚಿಕ್ಕ‌ ಜಗಳ ಆಯ್ತು. ನಾನು ನನ್ನ ಪಾಡಿಗೆ ಆಹಾರ ಹುಡುಕಿಕೊಂಡು ಅವಳ‌ ಮನೆಯ ಬಳಿಯ ಗದ್ದೆಗೆ ಹೋಗಿದ್ದೆ. ಆದರೆ ಅವಳು, ನಾನು ಅವಳ‌ ಮಕ್ಕಳನ್ನು  ತಿನ್ನಲು ಬಂದೆ ಅಂತ ಅಪವಾದ ಹಾಕಿ ಬೊಬ್ಬೆ ಹೊಡೆದಳಕ್ಕ.‌ ನನಗೆ ಬೇಸರವಾಗಿ ಈಗ ಆ ಕಡೆ ಹೋಗೋದನ್ನೇ  ನಿಲ್ಲಿಸಿಬಿಟ್ಟಿದ್ದೇನೆ

ಕಪಿಲೆ: ಬೇಸರ ಮಾಡಿಕೊಳ್ಳಬೇಡ. ಮಕ್ಕಳ ರಕ್ಷಣೆಗೆ ತಾಯಿ ವಿಶೇಷ ಕಾಳಜಿ ವಹಿಸುತ್ತಾಳೆ ಅಂತ ನಿನಗೂ ಗೊತ್ತಿದೆ. ಇದೂ ಹಾಗೆಯೇ ಅಂದುಕೋ.‌ ಅವಳ‌ ಬಗ್ಗೆ ಕೋಪ ಬೇಡ. ಸಮಯ ಬಂದಾಗ ಎಲ್ಲ‌ ಸರಿ ಹೋಗ್ತದೆ.


ಒಂದು ದಿನ‌ ಕಪಿಲೆ ಮೇಯುತ್ತಾ ಮೇಯುತ್ತಾ ಡೊಂಗ್ರಿ ಕಪ್ಪೆಯ ಮನೆಯ ಬಳಿಯೇ ಬಂದಿದ್ದಳು. ದೃಷ್ಟಿ ಮಂದವಾದ ಕಪಿಲೆಗೆ ತಾನು ಕಪ್ಪೆಯ ಮನೆಯ ಬಳಿಯೇ ಬಂದಿರೋದು ಅಂದಾಜಾಗಲಿಲ್ಲ. ಡೊಂಗ್ರಿಯ ಮಕ್ಕಳು ನೀರಿನಲ್ಲಿ ಆಡಲೆಂದು ಮನೆಯ ಹೊರಗೆ ಬಂದಿದ್ದವು. ಆಡುತ್ತಾ ಆಡುತ್ತಾ ಅವು ಕಪಿಲೆಯ ಕಾಲಿನ‌ ಬಳಿಯೇ ಬಂದವು.‌ ಕಪಿಲೆ ಕಾಲನ್ನು ಎತ್ತಿ ಇಡುವಾಗ ಒಂದು‌ ಕಪ್ಪೆ ಕಪಿಲೆಯ ಕಾಲಿನ‌ ಗೊರಸುಗಳ‌ ಮಧ್ಯೆ ಸಿಕ್ಕಿಹಾಕಿಕೊಂಡಿತು. 

"ಅಮ್ಮಾ..ಸತ್ತೇ!" 

ಅಯ್ಯೋ, ಅಣ್ಣ ದನದ ಕಾಲಿನಡಿ ಬಿದ್ದುಬಿಟ್ಟಿದ್ದಾನೆ. ಯಾರಾದರೂ ಕಾಪಾಡಿ!

ಮಕ್ಕಳು ಭಯದಿಂದ ಕಿರುಚಿದರು.

ಡೊಂಗ್ರಿ ಎದ್ದು ಬಿದ್ದು ಬಂದಳು.

ಡೊಂಗ್ರಿ: ಅಯ್ಯೋ ಅಯ್ಯೋ, ನನ್ನ ಮಗುವನ್ನು ಕಪಿಲೆ ತುಳಿದು ಕೊಂದು ಹಾಕಿದಳಪ್ಪ. ನನ್ನ ಕುಟುಂಬವನ್ನು ನಾಶ ಮಾಡಲೆಂದೇ ಕಾಯ್ತಾ ಇದ್ದೀಯಲ್ಲೇ, ಕಣ್ಣು ಕಾಣದ ಕುರುಡಿ. ನನ್ನ‌ ಮಗುವನ್ನು ಸಾಯಿಸಿಬಿಟ್ಯಲ್ಲೇ?

ಮರಿ: ನಾನಿನ್ನೂ ಸತ್ತಿಲ್ಲಮ್ಮಾ. ಆದರೆ ನನಗೆ ಹೊರಗೆ ಬರಲು ಆಗ್ತಾ ಇಲ್ಲ, ಉಸಿರುಗಟ್ತಾ ಇದೆ. ಕೆಲವು ನಿಮಿಷದಲ್ಲಿ ಸತ್ತುಹೋಗ್ತೀನಮ್ಮಾ. ಅಯ್ಯೋ..

ಆಗ ಎಲ್ಲರೂ ಓಡಿ ಬಂದರು.

ಡೊಂಗ್ರಿ: ಅಯ್ಯೋ ಮನೆಹಾಳಿ ದನವೇ, ನಾನು ಈತನಕ ಯಾರ ಮುಂದೆಯೂ ಕೈಮುಗಿದು ಬೇಡಿದ್ದಿಲ್ಲ. ಆದರೆ ನಿನಗೆ ಕೈಮುಗಿಯುತ್ತೇನೆ, ನನ್ನ ಮಗುವನ್ನು ಸಾಯಿಸಬೇಡವೇ, ದಮ್ಮಯ್ಯ.

ಕಪಿಲೆ: ಅಯ್ಯೋ ಕಪ್ಪೆ, ನಾನು ತಿಳಿಯದೇ ಕಾಲಿಟ್ಟೆ. ನಿನ್ನ ಮಗುವನ್ನು ಸಾಯಿಸಲು ಬಂದವಳಲ್ಲ ನಾನು. ನಿನ್ನ‌ ಮಗು ನನ್ನ‌ ಕಾಲಬಳಿ ಬಂದದ್ದು ತಿಳಿಯಲಿಲ್ಲ ಮಾರಾಯ್ತಿ.

ಡೊಂಗ್ರಿ: ನಿನ್ನ ಪುರಾಣ ಸಾಕು‌ಮಾಡು. ನನ್ನ‌ ಕಂದನನ್ನು ಉಳಿಸಿಕೊಡು.

ಕಪಿಲೆ: ಅವಸರ ಪಡಬೇಡ ಡೊಂಗ್ರಿ. ಒಂದು ಕೆಲಸ ಮಾಡು. ಈಗಲೇ ಗೊರವ ಕೊಕ್ಕರೆಯ ಬಳಿ ಹೋಗು. ಕಪಿಲೆ ಬರಹೇಳಿದಳು ಅಂತ ತಿಳಿಸಿ ,ಕರೆದುಕೊಂಡು ಬಾ. ಅವನು ಉಪಾಯವಾಗಿ ನಿನ್ನ ಮಗುವನ್ನು‌ ನನ್ನ ಗೊರಸಿನಿಂದ ಬಿಡಿಸಿ ಕಾಪಾಡಬಲ್ಲ.

ಡೊಂಗ್ರಿ: ಅಯ್ಯೋ ದೇವರೇ, ಮೊನ್ನೆ ಒಂದು ದಿನ ನಾನು ಅವನೊಂದಿಗೆ ಜಗಳವಾಡಿಬಿಟ್ಟೆ. ಅವನಿಗೆ ನನ್ನ ಮೇಲೆ ಬೇಸರವಾಗಿ ಹೋಗಿಬಿಟ್ಟ. ಈಗ ಹೋಗಿಕೇಳಿದರೆ, ' ಸಾಯಲಿಬಿಡು' ಅಂದಾನು. ಏನು ಮಾಡಲಿ ಕಪಿಲಕ್ಕ?

ಕಪಿಲೆ: ನೋಡು, ನಾವು ಪ್ರಾಣಿಗಳು ಮನುಷ್ಯರ ಹಾಗಲ್ಲ. ಹೋಗಿ ಕೇಳಿಕೋ. 'ಕಪಿಲೆ ಅಕ್ಕನೇ ಹೇಳಿದಳು' ಅಂತ ಒತ್ತಿಹೇಳು, ಬರುತ್ತಾನೆ.

ಹಾಗೆಯೇ ಡೊಂಗ್ರಿ ಕೊಕ್ಕರೆಯ ಬಳಿ ಹೋಗಿ ಬೇಡಿಕೊಂಡಳು. ಕೊಕ್ಕರೆ ಮರುಮಾತಿಲ್ಲದೆ ಹಾರಿಬಂದಳು. ಕಪಿಲೆಯ ಗೊರಸಿನ ಮಧ್ಯೆ ಕಪ್ಪೆಮರಿ ಒದ್ದಾಡುತ್ತಿತ್ತು. ವಯಸ್ಸಾದ ಕಪಿಲೆಗೆ ತನ್ನ‌ ಗೊರಸುಗಳನ್ನು ಅಗಲು‌ ಮಾಡುವ ಶಕ್ತಿ‌ ಇರಲಿಲ್ಲ. ಗೊರವ ಕೊಕ್ಕರೆಯೇ ತನ್ನ‌ ಕೊಕ್ಕು‌ ಮತ್ತು ಕಾಲುಗಳ ಸಹಾಯದಿಂದ ಕಪ್ಪೆಮರಿಯನ್ನು ಉಪಾಯದಿಂದ ನೋವಾಗದಂತೆ ಬಿಡಿಸಿತು. ಮರಿಕಪ್ಪೆ ಒಂದಿಷ್ಟೂ ಏಟಾಗದಂತೆ ಬಚಾವಾಯಿತು. ಅಲ್ಲಿ ಸೇರಿದ್ದ ಎಲ್ಲರಿಗೂ ಸಮಾಧಾನವಾಯಿತು.   ದೀರ್ಘವಾಗಿ ಉಸಿರೆಳೆದುಕೊಂಡ ಮರಿಕಪ್ಪೆ ನಡುಗುತ್ತಾ ಅಮ್ಮ‌ನ ಬಳಿ ಬಂತು. ಡೊಂಗ್ರಿ ಅದನ್ನು ಬಿಗಿದಪ್ಪಿಕೊಂಡು ನಿಟ್ಟುಸಿರುಬಿಟ್ಟಿತು. ಡೊಂಗ್ರಿ ತಲೆಯೆತ್ತದೆ ನಿಂತಿತ್ತು.  ತನ್ನ ಮಗುವನ್ನು ಕಾಪಾಡಿದ ಕೊಕ್ಕರೆಯನ್ನು ತುಂಬ ಕೆಟ್ಟದಾಗಿ ನಡೆಸಿಕೊಂಡದ್ದಕ್ಕೆ ಡೊಂಗ್ರಿಗೆ ಕಣ್ಣೀರು ಬಂದಿತು. ಕೊಕ್ಕರೆ ಡೊಂಗ್ರಿಯ ಬಳಿಗೆ ಬಂದು ಅದನ್ನು ಸಂತೈಸಿ ಸಮಾಧಾನಪಡಿಸಿತು. 

ಕಪಿಲೆ: ನೋಡು ಡೊಂಗ್ರಿ, ಪ್ರಾಣಿ ಪಕ್ಷಿಗಳಾದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಜೀವನಪೂರ್ತಿ ಪ್ರೀತಿಯಿಂದ ಬದುಕಬೇಕು. ಅದುವೇ ಚಂದ. ಕೋಪ, ಜಂಭ, ದೊಡ್ಡಸ್ತಿಕೆ, ಜಗಳ ಎಷ್ಟು ದಿನ ಹೇಳು. ಅಲ್ವ? 

ತಪ್ಪಾದರೂ ತಿದ್ದಿಕೊಳ್ಳಲು ಅವಕಾಶವಿದೆ. ಹೊಂದಾಣಿಕೆ‌ ಮಾಡಿಕೊಂಡು ಸ್ನೇಹಿತರಂತಿದ್ದರೆ ಎಷ್ಟು ಚಂದ ಅಲ್ವೇನೇ?

ಕಪಿಲೆಯ ಮೃದುಮಾತು ಕೇಳಿದ ಡೊಂಗ್ರಿಗೆ ಇವರೆಲ್ಲಾ ತನ್ನವರು ಎಂಬ ಭಾವ ಮೂಡಿತು.

Comments

Popular posts from this blog

ಮಾತು ಕೇಳದ ಹಲ್ಲಿ

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

ಪೆಂಗಪ್ಪ ಮಂಗಪ್ಪ