ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

ಹಕ್ಕಿ ಜೇನ್ ಗುಳಕ ಅಳ್ತಾ ಇದ್ದ. ಅವನ ಗೆಳತಿ ಜೇನ್ ಗುಳಕಿ ಬಿದ್ದು ಬಿದ್ದು ನಗ್ತಾ ಇದ್ದಳು

ಜೇನ್ ಗುಳಕ- ನಗು ನಗು. ನನ್ನ ಕಷ್ಟ ನಂಗೆ. ನಿಂಗೇನು?

ಜೇನ್ ಗುಳಕಿ- ಹಾಹಹ್ಹಹ್ಹ ಹೋಹ್ಹೊಹ್ಹೊಹ್ಹೊ.ಹಹ್ಹಹ್ಹ..ಅಯ್ಯೋ ನಿನ್ನ ಅವಸ್ಥೆಯೇ! ನಿನ್ನ ಪಾಡು ನೋಡಿದ್ರೆ ಅಳಬೇಕು ಅನ್ನಿಸ್ತಿದೆ. ಆದ್ರೆ ನಾನು ಅಳಲ್ಲ, ನಗ್ತೇನೆ. ಹಾಹಹ್ಹಹ್ಹ..

- ನಗಬೇಡವೇ ನಂಗೆ ತುಂಬ ಬೇಜಾರಾಗ್ತದೆ. ನಿಂಗೆ ನನ್ನ ಮೇಲೆ ಪ್ರೀತಿಯೇ ಇಲ್ಲ!

-ಪ್ರೀತಿ ಅಂತೆ ಪ್ರೀತಿ! ಒಂದು ಜೇನ್ ಹುಳಾನ ಹಿಡಿದು ತಿನ್ನೋಕೂ ಬರಲ್ಲ ನಿಂಗೆ. ಅಷ್ಟಕ್ಕೇ ಅಳ್ತೀಯ. ಇನ್ನು ನನ್ನ ಹೆಂಗೆ ಸಾಕ್ತೀಯಾ? ನಿನ್ನ ಮದ್ವೆ ಆದ್ರೆ ನನ್ನ ಬದುಕು ಬದನೆಕಾಯ್ ಆಗಿಹೋಗುತ್ತೆ!

-  ತಾಳು ತಾಳು. ಅಮ್ಮನ ಹತ್ರ ಹೇಳ್ತೇನೆ.

- ಹೇಳ್ಕೊ ಹೋಗ್. ನಾನು ಯಾರಿಗೂ ಹೆದರೋಳಲ್ಲ. ನಿನಗೂ, ನಿನ್ನಮ್ಮಂಗೂ!

- ನೀನು ಬರೀ ಬಜಾರಿ. ಯಾಕಾದ್ರೂ ನಿನ್ನ ಸಹವಾಸ ಮಾಡಿದ್ನೋ ನಾನು?

- ಹಹ..ಹೋಗಿ ಅಮ್ಮನ ಬಾಲ ಹಿಡ್ಕೊಂಡ್ ತಿರುಗು..ಪೆದ್ದು ಕಂದಾ!

( ಗುಳಕ ಜೋಲುಮೋರೆಯಲ್ಲಿ ಅಮ್ಮನ ಬಳಿಗೆ ಬಂದ)

- ಅಮ್ಮಾ.. ಅಮ್ಮಾ..

ಅಯ್ಯೋ ಮಗಾ.. ಯಾಕ್ ಅಳ್ತಾ ಇದೀಯಾ? ನನ್ ಕಂದನಿಗೆ ಯಾರ್ ಏನಪ್ಪಾ ಮಾಡಿದ್ರು?

- ನೋಡಮ್ಮ ಆ ಬಜಾರಿ ಜೇನ್ಗುಳಕಿ  ನಂಗೆ ತಮಾಷೆ ಮಾಡ್ತಾಳೆ.

- ( ತುಸು ಕೋಪದಿಂದ)

ಅಯ್ಯೊ ಮನೆಮುರುಕಿಯೇ! ಏನಾಗಿದೆ ಅಂತೆ ಅವಳಿಗೆ? ಯಾಕೆ ನಿಂಗೆ ತಮಾಷೆ ಮಾಡ್ತಾಳೆ?

- ನಂಗೆ ಜೇನ್ ಹುಳಾನ ಹಿಡಿಯೋ ಕ್ರಮ, ಹಿಡಿದು ತಿನ್ನೋ ಕ್ರಮ ಗೊತ್ತಿಲ್ಲ ಅಂತೆ. 'ನಿನ್ನಮ್ಮ ಅದನ್ನೆಲ್ಲಾ ಹೇಳ್ಕೊಟ್ಟಿಲ್ವಾ? ಮನೆಯ ಆಚಾರ ವಿಚಾರ ಗೊತ್ತಿಲ್ವಾ ಅಂತ ಕೇಳ್ತಾಳೆ?



- ಗ್ರಹಚಾರ ಬಿಡಿಸ್ತೀನಿ ಅವಳದ್ದು. ನಿಂಗೆ ಅದನ್ನೆಲ್ಲ ಕಲಿಸಿಕೊಟ್ಟಿದ್ನಲ್ಲೋ ಮಗನೇ? 

-ನೀನ್ ಕಲಿಸಿಕೊಟ್ಟೆ. ನಂಗೆ ಜೇನುಹುಳಾನ ಹಿಡಿಯೋದು ಗೊತ್ತಾಯ್ತು. ಆದ್ರೆ ತಿನ್ನೋಕೆ ಹೋದ್ರೆ ಆ ನೊಣದ ಮುಳ್ಳು..ಅಬಾ..ನಾಲಿಗೆಗೇ ಚುಚ್ಚಿಕೊಳ್ಳುತ್ತೆ...

- ಅಯ್ಯೋ ಪೆದ್ದಾ, ತಿನ್ನೋ ಮೊದಲು ಮುಳ್ಳನ್ನು ತೆಗೀಬೇಕು.

- ಅದೇ ಆಗ್ತಿಲ್ಲ ಅಮ್ಮ. ನಾನ್ ಎಷ್ಟು ಪ್ರಯತ್ನಪಟ್ಟರೂ ಆಗ್ತಾನೇ ಇಲ್ಲ.

- ತಾಳು ಇನ್ನೊಮ್ಮೆ ಕಲಿಸ್ತೀನಿ. ನೋಡಿ ಕಲಿ, ಮಾಡಿ ತಿಳಿ. ಬಾ ಹುಳು ಹುಡ್ಕೊಂಡ್ ಬರೋಣ.

( ಗಾಳಿಯಲ್ಲಿ ಇಬ್ಬರೂ ಒಂದು ಸುತ್ತು ಹಾರಿ ತಿರುಗಿಬಂದಾಗ ಇಬ್ಬರ ಕೊಕ್ಕಿನಲ್ಲೂ ಒಂದೊಂದು ಜೇನುಹುಳು ಇರುತ್ತದೆ.)

- ವೆರಿಗುಡ್ ಮೈ ಬಾಯ್! ಹಿಡಿಯೋದರಲ್ಲಿ ಪಳಗಿದ್ದೀಯ.

- ಥ್ಯಾಂಕ್ಯೂ ಅಮ್ಮ.!

-ಓಕೆ ಓಕೆ. ಈಗ ಸೂಜಿ ಎದುರು ಬರುವಂತೆ  ಜೇನುಹುಳವನ್ನು ಕೊಕ್ಕಿನಲ್ಲಿ ಗಟ್ಟಿಯಾಗಿ ಅಮರಿಸಿ ಹಿಡ್ಕೋ.

-ಮ್...

-ಈಗ, ಎಷ್ಟ್ ರಭಸ ಆಗುತ್ತೋ ಅಷ್ಟು ರಭಸದಲ್ಲಿ ಮರದ ತೊಗಟೆಗೆ ಕಣ್ಮುಚ್ಕೊಂಡು ಉಜ್ಜಬೇಕು. ಹೇಗೇ?......

-ರಪ್ ರಪ್ ರಪಾ..ಕ್..!

- ಹಾ. ರೆಡೀ ವನ್,ಟೂ ತ್ರೀ..

ರಪ್ ರಪ್ ರಪಾ..ಕ್..!

-ನೋಡು, ಮುಳ್ಳು ಹೋಯ್ತಾ?

-ಚೂರು ಹೋಯ್ತು. ಸ್ವಲ್ಪ ಉಳಿದಿದೆ.

- ಸ್ವಲ್ಪಾನೂ ಉಳೀಬಾರ್ದು. ಮುಳ್ಳು ನಂಜು.

ನೋಡದೇ ತಿಂದು ಮುಳ್ಳು ಗಂಟಲಿಗೆ ಚುಚ್ಚಿದ್ರೆ..

- ಗೊಟಕ್!?

- ಗೊಟಕ್ ಆಗಲ್ಲ. ಗಂಟಲ ಮುಳ್ಳು ತೆಗೀಬೇಕಂದ್ರೆ ಕ್ಯಾಕರಿಸಿ ಕ್ಯಾಕರಿಸಿ ಸಾಯ್ಬೇಕು!

ಇರ್ಲಿ. ಈಗ ಇನ್ನೊಂದ್ಸಾರಿ..

-ರಪ್ ರಪ್ ರಪಾ..ಕ್..

ಈಗ?

- ಮುಳ್ಳು ಹೋಯ್ತೂ..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

- ಜಾಣ..ಈಗ ಹೋಗಿ ಆ ನಿನ್ನ ಬಜಾರಿ ಬಸವಿಗೆ ಹೋಗಿ ಕೊಡು. 

- ಆಗಲಮ್ಮ ಬರ್ತೀನಿ. ಇದನ್ನ ನಾನೇ ತಿಂದು ಅವಳಗೆ ಫ್ರೆಶ್ ಆಗಿ ಹಿಡ್ದು ಮುಳ್ಳು ತೆಗೆದು ಕೊಡ್ತೀನಿ.

- ಆಯ್ತು ಹೋಗು.  ಅವಳಿಗೆ ಬಯ್ಬೇಡ. ಬಜಾರಿ ಆದ್ರೂ ಒಳ್ಳೆ ಮನಸ್ಸಿನ ಹುಡುಗಿ ಅವಳು. ನನ್ನ ಮುದ್ದು ಸೊಸೆ..

(ಜೇನ್ಗುಳಕ ನಾಚುತ್ತಾ ಅತ್ತ ಕಡೆ ಹಾರಿದ)

Comments

Popular posts from this blog

ಮಾತು ಕೇಳದ ಹಲ್ಲಿ

ಪೆಂಗಪ್ಪ ಮಂಗಪ್ಪ