ಮಾತು ಕೇಳದ ಹಲ್ಲಿ

 ಪಿಂಚು ಹಲ್ಲಿ ಮಹಾ ಒರಟ. ಅದು ತನ್ನ ಅಮ್ಮ ಹಲ್ಲಿಯ ಮಾತನ್ನು ಕೇಳುತ್ತಿರಲಿಲ್ಲ. ಮನೆಯ ಹಿರಿಯನಾದ ಅಜ್ಜ ಹಲ್ಲಿಯ ಮಾತನ್ನೂ‌ ಕೇಳುತ್ತಿರಲಿಲ್ಲ. ಮನೆಯವರಿಗೆಲ್ಲ ಅದನ್ನು ಸಹಿಸಲು ಕಷ್ಟವಾಗುತ್ತಿತ್ತು. ಅದರ ಕೀಟಲೆಗಳನ್ನು ನೋಡಿಕೊಂಡು ಸುಮ್ಮನೆ‌ ಇರಬೇಕಾಗಿತ್ತು. ಅದರ ತುಂಟತನದಿಂದ ಬೇರೆಯವರಿಗೇನೂ ತೊಂದರೆ ಆಗುತ್ತಿರಲಿಲ್ಲ‌. ಆದರೆ ಅದುವೇ ತೊಂದರೆಗೊಳಗಾಗುತ್ತಿತ್ತು. 

ಅಜ್ಜ: ಪಿಂಚು, ನೀನು ಜಾಣನಾಗಬೇಕು. ಅಮ್ಮ‌ ಅಥವಾ ಮನೆಯ ಹಿರಿಯರು‌‌‌ ಹೇಳಿದ ಮಾತನ್ನು ‌ಕೇಳಬೇಕಪ್ಪಾ. ನಾವು ಅನುಭವದಿಂದ ಕಲಿತ ಬುದ್ಧಿಮಾತನ್ನು ಹೇಳಿದರೆ ಅದು ನಿನ್ನ ಒಳ್ಳೆಯದಕ್ಕೆ ತಾನೇ? ಅದರಂತೆ ನಡೆದರೆ ಜೀವನ ಸಂತೋಷಮಯವಾಗುತ್ತದೆ. ಅಪಾಯದಲ್ಲಿ ಸಿಕ್ಕಾಗ ನೆರವಿಗೆ ಬರೋದು ನಮ್ಮ ಮಾತುಗಳೇ.

ಪಿಂಚು- ಅಯ್, ಹೋಗಜ್ಜ ನೀನು.‌ ಯಾವಾಗ್ಲೂ ಇದನ್ನೇ ಹೇಳ್ತೀಯ.‌ 

ಅಜ್ಜ: ಹಾಗಲ್ಲ ಮಗೂ..

ಪಿಂಚು: ಆಯ್ತಜ್ಜ. ನಿನ್ನ ಮಾತು ಈ ಸಾರಿ ಕೇಳ್ತೇನೆ. ಆದ್ರೆ ಎಲ್ಲ ಸಾರಿಯೂ ಅಲ್ಲ. ಅಮ್ಮ ಅಂತೂ ಹಾಗ್ ಮಾಡ್ಬೇಡ, ಹೀಗ್ ಮಾಡ್ಬೇಡ ಅಂತಾನೇ ಇರ್ತಾಳೆ.‌ ಅದೆಲ್ಲ ನನಗಾಗಲ್ಲ. ನಂಗೆ ಹೇಗೆ ಬೇಕೋ ಹಾಗಿರ್ತೀನಿ. ಹಾಗೇ ಮಾಡ್ತೀನಿ.

ಅಜ್ಜ: ಅಯ್ಯೋ, ನಿಂಗೆ ಎಷ್ಟು ಹೇಳಿದ್ರೂ ಅಷ್ಟೇ. ಇರಲಿ, ನಾನು ನಿಂಗೊಂದು ಕತೆ ಹೇಳ್ತೇನೆ. ಕತೆ ಅಂದ್ರೆ ಕತೆ ಅಲ್ಲ. ಶತ್ರುವಿನಿಂದ ಬಚಾವಾಗುವ ಒಂದು ಉಪಾಯ. ಸ್ವಲ್ಪ ಕೂತು ಕೇಳ್ತೀಯಾ?

ಪಿಂಚು: ಆಗಲಿ, ಆಸಕ್ತಿ ಬಂದ್ರೆ ಪೂರ್ತಿ ಕೇಳ್ತೀನಿ. ಇಲ್ಲಾಂದ್ರೆ ಎದ್ದು ಆಡಲು ಹೋಗ್ತೇನೆ.

ಅಜ್ಜ: ನೋಡು, ನೀನು ನಿನಗೆ ಬೇಕಾದ ಆಹಾರ ತಿನ್ನಲು, ಗೆಳೆಯರೊಂದಿಗೆ ಆಡಲು ಸದಾ ಗೋಡೆಯ ಮೇಲೆ ಓಡಾಡ್ತಾ ಇರ್ತಿ ಅಲ್ವ? 

ಪಿಂಚು: ಹೌದು, ನಾವು ಎಲ್ಲರೂ ಗೋಡೆಯ ಮೇಲೆಯೇ ಓಡಾಡೋದು. ಮಾಡಿನ ಮೇಲೆ ಅಲ್ಲ.

ಅಜ್ಜ: ನಮ್ಮ ಕೈಕಾಲುಗಳಲ್ಲಿ ಗೋಡೆಯನ್ನು ಗಟ್ಟಿಯಾಗಿ ಹಿಡಿದಿಡುವ ಶಕ್ತಿ ಇದೆ.‌ ಬೇರೆ ತುಂಬ ಜೀವಿಗಳಿಗಳಲ್ಲಿ ಈ ಶಕ್ತಿ ಇಲ್ಲ.

ಪಿಂಚು: ಹೂಂ, ಮುಂದಕ್ಕೆ‌ ಹೇಳು.

ಅಜ್ಜ: ಆದರೂ ಕೆಲವೊಮ್ಮೆ ನಾವು ನಮ್ಮ ಗ್ರಹಚಾರ ಕೆಟ್ಟು ಕೆಳಗೆ ನೆಲದ‌ ಮೇಲೆ ಬೀಳ್ತೇವೆ. ಆಗ..!

ಪಿಂಚು- ಆಗ.?.

ಅಜ್ಜ: ನಮಗೂ ಶತ್ರುಗಳಿದ್ದಾರೆ. ನಮ್ಮನು ಹಿಡಿದು ತಿನ್ನಲು ಹೊಂಚು ಹಾಕಿ ಕಾಯ್ತಾ ಇರ್ತಾರೆ!

ಪಿಂಚು- ಯಾರು?

ಅಜ್ಜ- ಉದಾಹರಣೆಗೆ, ಬೆಕ್ಕು!

ಪಿಂಚು-  ಹಾ, ಬೆಕ್ಕು.‌ ನೋಡಿದ್ದೇನೆ. ಈ ಮನೆಯಲ್ಲಿ ಒಂದು ಬೆಕ್ಕು ಇದೆ. ಕಪ್ಪು ಮೂತಿಯ ಕಾಳಪ್ಪ..

ಅಜ್ಜ- ನಾವು ನೆಲಕ್ಕೆ ಬಿದ್ದಾಗ ರಪಕ್ಕನೆ ನಮ್ಮನ್ನು ಹಿಡಿಯಲು ಬರ್ತದೆ. ಆಗ ನಮ್ಮನ್ನು ನಾವು ರಕ್ಷಿಸಿಕೊಳ್ಳೋದು ಹೇಗೆ?

ಪಿಂಚು- ಓಟ! ಒಂದೇ ಸಮನೆ‌ ಓಟ. ಅಷ್ಟು ಗೊತ್ತಿಲ್ವ ನಿಂಗೆ?

ಅಜ್ಜ- ಸರಿ. ಬೆಕ್ಕು ನಮ್ಮನ್ನು ಹಿಡಿದೇ ಬಿಟ್ಟಿತು ಅಂದುಕೋ.‌ ಆಗ?

ಪಿಂಚು- ಓಹ್, ಆಗ ನಾವು ಪಡ್ಚ. ಏನು ಮಾಡೋದು ಅಜ್ಜ!?

ಅಜ್ಜ: ನಮಗೆ ದೇವರು‌ ಇನ್ನೊಂದು ಶಕ್ತಿ ಕೊಟ್ಟಿದ್ದಾನೆ. 

ಪಿಂಚು- ಏನದು?

ಅಜ್ಜ- ನಮ್ಮ‌ ಬಾಲವನ್ನು ಅಲ್ಲೇ ಕಳಚಿ ಬಿಸಾಕಿ ಅಲ್ಲಿಂದ ಓಡೋದು! 

ಪಿಂಚು- ಬಾಲ? 

ಅಜ್ಜ- ಹಾ ಬಾಲ.  ಬಾಲ ತುಂಡಾಗಿ ಕಳಚಿ ಹೋದರೂ ನಾವು ಸಾಯೋದಿಲ್ಲ. ಆದರೆ ಆ ತುಂಡು ಬಾಲದಲ್ಲಿ ಇನ್ನೂ ಜೀವ ಇರ್ತದೆ. ಅದು ಪಟ ಪಟ ಪಟ ಅಂತ ತುಂಬಾ ಹೊತ್ತು ಕೊಸರಾಡ್ತಾ ಇರ್ತದೆ. ಬೆಕ್ಕಿನ‌ ಗಮನ ಆ ಬಾಲದ ಕಡೆಗೆ ಹೋಗ್ತದೆ. ಆಗ ಅಲ್ಲಿಂದ ಓಟಕೀಳಬೇಕು. 

ಪಿಂಚು: ಅರೆ! ಇದು ನಂಗೆ ಗೊತ್ತಿರಲಿಲ್ಲ. ಆದರೆ ಅಯ್ಯೋ, ಆಗ ನಾನು ಬಾಲ‌ವಿಲ್ಲದೆ ಅಂಗವಿಕಲ ಆಗುತ್ತೇನಲ್ಲ? ಗೆಳೆಯರು‌ ತಮಾಷೆ ಮಾಡ್ತಾರೆ.

ಅಜ್ಜ- ಸ್ವಲ್ಪ ದಿನಾ ಆದ್ಮೇಲೆ ನಿನ್ನ ಕುಂಡೆಮೇಲೆ ಹೊಸ ಬಾಲ ಹುಟ್ಟಿಕೊಳ್ತದೆ!

ಪಿಂಚು- ಹಾಗಾದರೆ ಅಡ್ಡಿಯಿಲ್ಲ. ಈಗ ನಾನು‌ ಆಟಕ್ಕೆ ಹೋಗ್ತೇನೆ. ಹಹ್ಹಹ್ಹ, ನಿನ್ನ ಬಾಲದ ಕಟ್ಟುಕತೆಯ ಕಂತೆಪುರಾಣ ಕೇಳಿದರೆ ನಗು ಬರ್ತದೆ. ಬಾಲ‌ ಅಂತೆ ಬಾಲ. ಕತ್ತರಿಸಿದರೂ ಕುಣಿಯುವ ಬಾಲ.. ಹಹ್ಹಹ್ಹ.!

ಅಜ್ಜ- ನನ್ನ ಮಾತು ನಿಜ‌ ಮಗೂ.. ಸುಳ್ಳಲ್ಲ.

ಪಿಂಚು ಹಲ್ಲಿ ಅಜ್ಜನ‌ ಮಾತನ್ನು ತಮಾಷೆ‌ ಮಾಡ್ತಾ, ಗೋಡೆಯ ಮೇಲಿನ‌ ಸ್ನೇಹಿತರೊಂದಿಗೆ ಆಡಲು ಹೋಯ್ತು. ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗುವ ಆಟ. ಮೊದಲು ಪಿಂಚು ಉಳಿದಿಬ್ಬರು ಗೆಳೆಯರನ್ನು ಅಟ್ಟಿಸಿಕೊಂಡು ಹೋಯ್ತು‌. ಅವರು ಪಿಂಚುವಿನ ಕೈಗೆ ಸಿಗದಂತೆ ವೇಗವಾಗಿ ಓಡುತ್ತಾ ತಪ್ಪಿಸಿಕೊಳ್ಳುತ್ತಿದ್ದರು.‌ ಓಡಿ ಓಡಿ ಪಿಂಚುವಿಗೆ ಸುಸ್ತಾಗತೊಡಗಿತು. ಗೋಡೆಯಲ್ಲಿ ಒಂದು ಸಣ್ಣ ಬಿರುಕು ಇತ್ತು. ಗೋಡೆ ಒಡೆದು ಆ ಬಿರುಕು ಉಂಟಾಗಿತ್ತು. ಓಡುವ ಭರದಲ್ಲಿ ಪಿಂಚು ಅದನ್ನು ಜಿಗಿಯಲು ಹೋಗಿ, ಆಯತಪ್ಪಿ  ಕೆಳಗೆ ನೆಲಕ್ಕೆ ಬಿದ್ದುಬಿಟ್ಟಿತು! ತಕ್ಷಣ ಅದೆಲ್ಲೋ ಇದ್ದ ಕಾಳುಬೆಕ್ಕು ಛಂಗನೆ ಹಾರಿ ಪಿಂಚುವನ್ನು ಪಂಜಗಳಿಂದ ಅಮರಿಸಿ ಹಿಡಿಯಿತು. ಪಿಂಚುಗೆ ಉಸಿರುಗಟ್ಟತೊಡಗಿತು. ಕಾಳುಬೆಕ್ಕಿನ ಅರ್ಧಮುಚ್ಚಿದ ನೀಲಿಕಣ್ಣುಗಳು ಹೊಳೆಯುತ್ತಿದ್ದವು. ಅದರ ಬ್ರಹ್ಮಾಂಡ ಬಾಯಿಯಲ್ಲಿ ಗರಗಸದಂತಹ ಹಲ್ಲುಗಳನ್ನು ನೋಡಿ ಭಯವಾಯಿತು. ಅದರ ಕಾಲಿನ ಉಗುರುಗಳು ಹೊರಚಾಚಿದರೇ ಸಾಕು, ಅವು ತನ್ನ ದೇಹವನ್ನು ಚುಚ್ಚಿ ಸುಲಿದುಬಿಡುತ್ತಿತ್ತು. ಪಿಂಚು ಭಯದಿಂದ ಕಿಚಿಕ್ ಕಿಚಿಕ್ ಅಂತ ಸದ್ದುಮಾಡಿದ. ಕಾಳುಬೆಕ್ಕು ಆಸಕ್ತಿ ಇಲ್ಲದಂತೆ ನಟಿಸಿತು. ಈ ಬೆಕ್ಕು ತನಗೆ ಒಂದೇಟು ಕೊಟ್ಟು ಸಾಯಿಸಿಯೇಬಿಡುತ್ತದೆ ಅಂತ ಯೋಚನೆ ಬಂದು ಪಿಂಚುವಿನ ಎದೆ ನಡುಗಿತು. ಅಷ್ಟರಲ್ಲಿ ಪಿಂಚುಗೆ ಅಜ್ಜ ಹೇಳಿದ ಮಾತು ನೆನಪಾಯಿತು.  ತಕ್ಷಣದಲ್ಲೇ ಅದು ತನ್ನ ಬಾಲವನ್ನು ಕಳಚಿಬಿಟ್ಟಿತು. ತನ್ನ ದೇಹದಿಂದ ತುಂಡಾಗಿ ಕಳಚಿಹೋದ ಬಾಲ ಸರ್ಕಸ್ಸಿನ ಗೊಂಬೆಯಂತೆ ಕುಣಿಯತೊಡಗಿತು! ಬೆಕ್ಕಿನ ಗಮನ ಹಲ್ಲಿಯ ಕುಣಿಯುವ ಬಾಲದ ಕಡೆ ಹೋಯಿತು. ಪಿಂಚುವಿನ ದೇಹದ ಮೇಲಿದ್ದ  ಬೆಕ್ಕಿನ ಕಾಲಿನ ಹಿಡಿತ ಸಡಿಲವಾಯಿತು. ಇದೇ ತಕ್ಕ ಅವಕಾಶ ಅಂದುಕೊಂಡ ಪಿಂಚು, ಸತ್ತೆನೋ ಕೆಟ್ಟೆನೋ ಅಂತ ಹಾರಿ ಗೋಡೆ ಮೇಲೇರಿ  

ತಪ್ಪಿಸಿಕೊಂಡು ಓಡಿಹೋಯಿತು!

ಕಾಳುಬೆಕ್ಕಿಗೆ ತಾನು ಮೋಸ ಹೋದದ್ದು ಅರಿವಾಗಲಿಲ್ಲ. ಅದು ಕುಣಿಯುವ ಬಾಲವನ್ನೇ ನೋಡುತ್ತಾ ಇದ್ದುಬಿಟ್ಟಿತು.

ಏದುಸಿರುಬಿಡುತ್ತಾ ಪಿಂಚುಹಲ್ಲಿ ಮನೆ ತಲುಪಿದಾಗ ಬಾಗಿಲಲ್ಲಿ ಅಜ್ಜ ನಿಂತಿದ್ದ‌. ಅಮ್ಮ  ಒಳಗಿದ್ದಳು. ನಿನ್ನ ಬಾಲ ಎಲ್ಲಿ? ಎಂದು ಅಜ್ಜ‌ ಕೇಳಿದ. ಪಿಂಚುವಿನ ಎದೆ ಢವಗುಟ್ಟುತ್ತಿತ್ತು. ಆದರೂ ಹೆದರಿಕೆಯನ್ನು ಮರೆಮಾಚುತ್ತ ಸುಳ್ಳು‌ ಕತೆ ಕಟ್ಟತೊಡಗಿದ. ಅಮ್ಮ ಮತ್ತು ಅಜ್ಜನಿಗೆ ಮುಖ ಕಾಣಿಸದಂತೆ ಕತ್ತಲಲ್ಲಿ ನಿಂತು ಜಂಭ ಕೊಚ್ಚತೊಡಗಿದ.  

ಪಿಂಚು- ಕೇಳಮ್ಮ, ಇಂದು ನಾನು ಆ ಕಾಳುಬೆಕ್ಕನ್ನು ಹೇಗೆ ಯಾಮಾರಿಸಿದೆ ಅಂತ ಕೇಳು. 

ನನಗೆ ಇಂದು ಮನೆಯ ನೆಲದ ಮೇಲೆ ಆಡುವಾ ಅನ್ನಿಸಿತು, ಆಡತೊಡಗಿದೆ. ಆಗ ಆ ಕಪ್ಪು ಮುಸುಡಿಯ ಬೆಕ್ಕು ನನ್ನನ್ನು ಹಿಡಿಯಲು ಬಂತು. ನನಗೆ ಸಿಟ್ಟು ಬಂತು. ನನ್ನ ತಂಟೆಗೆ ಬರಬೇಡ ಅಂದೆ, ಕೇಳಲಿಲ್ಲ. ನನಗೂ ಬೆಕ್ಕಿಗೂ ಭಾರೀ ಜಗಳವಾಯಿತು. ಟಪಾರ್...! ಬೆಕ್ಕಿನ‌ ಕಪಾಳಕ್ಕೆ ಒಂದೇಟು ಬಾರಿಸಿದೆ. ಬೆಕ್ಕಿಗೂ ಕೋಪ ಬಂದು ನನಗೇ ಹೊಡೆಯಲು ಬಂತು. ನಾನು ಅದರ ಬಾಲ ಹಿಡಿದೆಳೆದೆ. ಮುಸುಡಿಗೆ ಒದ್ದು ಮೀಸೆ ಹಿಡಿದು ಎಳೆದಾಗ ಅದಕ್ಕೆ ನೋವಾಗಿ ಅಯ್ಯೋ ಅಂದಿತು‌. ನಿನ್ನ ಹಲ್ಲು ಉದುರಿಸಲೇ ಅಂದೆ. ಬೆಕ್ಕು ಸೋತು, ಬೇಡಾ.. ಅಂತ ಅಂಗಲಾಚಿತು. ಅದಕ್ಕೆ ತುಂಬಾ ಹಸಿವೆಯಾಗಿತ್ತಂತೆ. ನಾನೇ,  ಹೋಗಲಿ ಪಾಪ ಅಂದುಕೊಂಡು, "ತಿಂದುಕೋ ಹೋಗು" ಅಂತ ನನ್ನ ಬಾಲವನ್ನು ಕತ್ತರಿಸಿಕೊಟ್ಟೆ. " ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ಜಾಗ್ರತೆ" ಅಂತ ಎಚ್ಚರಿಕೆ ಕೊಟ್ಟು ಬಂದೆ. ಹೇಗಿದೆ ನನ್ನ ಸಾಹಸ.?

ಅಜ್ಜ ಹಲ್ಲಿ ತಲೆಮೇಲೆ ಕೈಹೊತ್ತು ಕೂತಿತು.

ಅಮ್ಮ‌ ಹಲ್ಲಿಗೆ ಪಿಂಚುವಿನ‌ ಸುಳ್ಳು ಕತೆ ಕೇಳಿ ಸಿಟ್ಟು ಬಂತು.

"ಸಾಕು ಮಾಡು ನಿನ್ನ ಪೊಳ್ಳು ಸುಳ್ಳಿನ ಕಂತೆ. ಜಗಳವಂತೆ, ಮೀಸೆಯಂತೆ. ಆ ಬೆಕ್ಕು ನಿನ್ನನ್ನು ಸುಮ್ಮನೆ ಬಿಟ್ಟದ್ದಕ್ಕೆ ಧನ್ಯವಾದ ಹೇಳಬೇಕು ನೀನು. ನಮ್ಮ ಯಾರ ಮಾತೂ ಕೇಳಬೇಡ ನೀನು. ಬಾಲ ಹೋದರೆ ಬರುತ್ತದೆ. ಜೀವ ಹೋದರೆ ಬರುವುದಿಲ್ಲ ತಿಳಿದುಕೋ ಮಗಾ. ಬಾ, ರಕ್ತ ಬರುವ ಮುನ್ನ ಬಾಲ ಕತ್ತರಿಸಿದಲ್ಲಿಗೆ ಮದ್ದುಮಾಡಿ ಪಟ್ಟಿಕಟ್ಟುತ್ತೇನೆ. "

ಅಜ್ಜ- ಪಿಂಚುಮರೀ, ತುಸು ನಮ್ಮ ಮಾತು ಕೇಳಬೇಕಪ್ಪ ನೀನು. ಸುತ್ತಲಿನ ಜಗತ್ತು ಅಪಾಯಕಾರಿಯಾಗಿದೆ. ನಮ್ಮದಲ್ಲದ ಜಾಗಕ್ಕೆ ಹೋಗುವಾಗ ಹುಶಾರಾಗಿರಬೇಕು. ಅವಶ್ಯಬಿದ್ದಾಗ ನಮ್ಮ ಶಕ್ತಿಯನ್ನೂ, ಯುಕ್ತಿಯನ್ನೂ ಬಳಸಿಕೊಳ್ಳಬೇಕೇ ಹೊರತು, ಭಂಡಸಾಹಸ ಮಾಡಬಾರದು. ನಿನ್ನ ಅಪ್ಪನೂ ಇಂಥ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ. ನೀನು ಜಾಣ, ನನ್ನ‌ ಮಾತು ಕೇಳಬೇಕು. ಹೊಸ ಬಾಲ ಪೂರ್ತಿ ಬೆಳೆಯಲು ಎರಡು ತಿಂಗಳು ಬೇಕು. ಅಲ್ಲಿತನಕ ನೀನು ಎಲ್ಲಿಗೂ, ಯಾರ ಗೊಡವೆಗೂ ಹೋಗದೆ ಹುಶಾರಾಗಿರಬೇಕು. ನಮ್ಮ ಮಾತು ಮೀರಿ ಹೋದರೆ ನಿನಗೆ ಅಪಾಯ ತಪ್ಪಿದ್ದಲ್ಲ‌.


ಪಿಂಚು ಅರ್ಥವಾದಂತೆ ತಲೆಯಲ್ಲಾಡಿಸಿತು. ಆದರೆ ಅದಕ್ಕೆ ಅಜ್ಜನ ಮಾತು ಮನಸ್ಸಿಗೆ ಬರಲಿಲ್ಲ. ಅದಕ್ಕೆ ತನಗಿರುವ ಶಕ್ತಿಯನ್ನು ನೆನೆದು ಜಂಭ ಬಂದಿತ್ತು. ತುಂಡು ಬಾಲಕ್ಕೇ ಈ ಪರಿ ಶಕ್ತಿ ಇದೆಯೆಂದಾದರೆ ಇನ್ನುಳಿದ ಅಂಗಗಳಿಗೆ ತುಂಬಾ ಶಕ್ತಿ ಇದೆ ಅನ್ನಿಸಿತು. ಅದನ್ನು ನೆನೆದು ಹುಚ್ಚು ಸಾಹಸ ಮಾಡುವ ಮನಸ್ಸಾಯಿತು. ಈ ಅಜ್ಜ ಕೈಲಾಗದೆ ಹೀಗೆಲ್ಲ‌ ಮಾತಾಡುತ್ತಿದ್ದಾನೆ ಅಂತ ಭಾವಿಸಿತು. 'ಆ ಬೆಕ್ಕನ್ನು ಸಾಯಿಸಿಯೇ ಬಿಡಬಲ್ಲೆ. ಈ ಹೋರಾಟದಲ್ಲಿ ಕೈಕಾಲು ಹೋದರೂ ಮತ್ತೆ ಬೆಳೆಸಿಕೊಳ್ಳಬಲ್ಲೆ' ಅಂತ ಭಾವಿಸಿತು. ಬೆಕ್ಕನ್ನು ಬಿಡಬಾರದು ಅಂತ ನಿಶ್ಚಯಿಸಿತು.


ಕೆಲವು ದಿನಗಳ ನಂತರ ಪಿಂಚು, ಅಮ್ಮ ಅಜ್ಜನ ಕಣ್ಣು ತಪ್ಪಿಸಿ ಗೋಡೆಯ ಮೇಲೆ ಓಡಾಡಲು ತೊಡಗಿತು. ಕೆಳಗೆ ಟಿ.ವಿ.ಯ ಮೇಲೆ ಕಾಳುಬೆಕ್ಕು ನಿದ್ದೆ ಮಾಡುತ್ತಿತ್ತು. ಅಪಾಯವಿಲ್ಲ ಅನ್ನಿಸಿತು. ಆಗ ಗೋಡೆಯ ಮೇಲಿನ ವಿದ್ಯುತ್ ದೀಪದ ಸುತ್ತ ಕೀಟವೊಂದು ಸುಳಿದಾಡಿತು. ಅದು ಬಹಳ ದೊಡ್ಡದಿತ್ತು. ಪಿಂಚುವಿಗೆ ಹೇಗಾದರೂ ಅದನ್ನು ಹಿಡಿಯುವ ಉಮೇದು ಬಂತು. ಅದನ್ನು ಹಿಡಿದು ಮನೆಗೆ ಒಯ್ದರೆ ಅಜ್ಜನಿಗೆ ತನ್ನ ಶಕ್ತಿಯ ಪರಿಚಯ ಆಗುತ್ತದೆ ಅನ್ನಿಸಿತು. ಕೀಟವು ಲೈಟಿಗೆ ಟಣ್ ಟಣ್ ಅಂತ ಢಿಕ್ಕಿ ಹೊಡೆಯುತ್ತಾ ಹಾರುತ್ತಿತ್ತೇ ವಿನಃ ಎಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಪಿಂಚುವಿಗೆ ಸಹನೆ ತಪ್ಪಿತು. ಹಾರುತ್ತಿರುವಾಗಲೇ ಅದನ್ನು ಹಿಡಿಯುತ್ತೇನೆ ಅಂತಂದುಕೊಂಡಿತು. ಎರಡು ಕಾಲಿನಲ್ಲಿ‌ ನಿಂತು, ಎರಡು ಕೈಗಳಿಂದ ಹಿಡಿಯುತ್ತೇನೆ ಅಂತ ಯೋಚಿಸಿದ ಪಿಂಚು ಅವಸರದಿಂದ ಎರಡು ಕಾಲಿನ‌ ಮೇಲೆ ನಿಂತು ಕೀಟವನ್ನು ಹಿಡಿಯಲು ಮುನ್ನುಗ್ಗಿ ಸಮತೋಲನ ತಪ್ಪಿ ಧೊಪ್ಪನೆ ನೆಲದ ಮೇಲೆ ಬಿತ್ತು!   ನಿದ್ದೆ ಮಾಡಿದಂತೆ ನಟಿಸುತ್ತಿದ್ದ ಕಾಳುಬೆಕ್ಕು ಹಲ್ಲಿಯ ಮೇಲೆ ಚಂಗನೆ ಜಿಗಿದುಬಿಟ್ಟಿತು.

 ಪಿಂಚು ಪ್ರಾಣ ಭಯದಿಂದ ಕೀಚ್ ಕೀಚ್ ಎಂದು ಸದ್ದು ಮಾಡಿದ. ಬೆಕ್ಕನ್ನು ದಿಕ್ಕುತಪ್ಪಿಸಲು ಸಾಧ್ಯವಿರಲಿಲ್ಲ. ಮತ್ತೊಮ್ಮೆ ಕ್ರೀಚ್..ಕ್ರೀಚ್ ಎಂದು ಅರಚಿದ. ತಕ್ಷಣ ಪಿಂಚುವಿನ ಅಜ್ಜ ಎಲ್ಲಿದ್ದನೋ ಗೋಡೆಯ ಮೇಲೆ ಓಡಿ  ಬಂದು ಕೀಚ್ರ್ ಕೀಚ್ರ್ ಕೀಚ್ರ್ ಎಂದು ಕರ್ಕಶವಾಗಿ ಅರಚಿತು. ಪಿಂಚುವನ್ನು ಹಿಡಿದ ಬೆಕ್ಕಿನ ಗಮನ ಅತ್ತ ಹೋಯಿತು. ಅಜ್ಜ ಹಲ್ಲಿ ಗೋಡೆಯ ಕೆಳಬದಿಗೆ  ಹರಿದಾಡಿಕೊಂಡು ಬಂದು ಬೆಕ್ಕಿಗೆ ಕಾಣುವಂತೆ ತನ್ನ ಬಾಲವನ್ನು ಕಳಚಿಬಿಟ್ಟಿತು! ತುಂಡಾದ ಬಾಲ ಬೆಕ್ಕಿನ ಸಮೀಪವೇ ಬಿದ್ದು ತಟಪಟ ಕೊಸರಾಡತೊಡಗಿತು. ಬೆಕ್ಕಿನ ಗಮನ ಅದರ ಕಡೆ ಸರಿದದ್ದನ್ನು ನೋಡಿದ ಅಜ್ಜ ಮರಳಿ ಅಲ್ಲಿಂದ ಓಡತೊಡಗಿದ. ಪ್ರಾಣಭಯದಿಂದ ನಡುಗುತ್ತಿದ್ದ ಪಿಂಚು ಕೂಡಾ ರಭಸದಿಂದ ಅಜ್ಜನನ್ನು ಹಿಂಬಾಲಿಸಿದ. ಅವನ‌ ಎದೆ ಹೊಡೆದುಕೊಳ್ಳುತ್ತಿತ್ತು. ಅಜ್ಜ ಬರುವುದು ಒಂದು ಕ್ಷಣ ತಡವಾಗಿದ್ದರೂ ಅವನು ಸತ್ತುಹೋಗುತ್ತಿದ್ದ.

ಆಗ ಅವನಿಗೆ ಅಜ್ಜನ ಮಾತನ್ನು ಕೇಳದೇ  ತಾನೆಂತಹ ತಪ್ಪು ಮಾಡಿದೆ ಅಂತ  ಅರಿವಾಯಿತು.

Comments

Popular posts from this blog

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

ಪೆಂಗಪ್ಪ ಮಂಗಪ್ಪ