ಮಹತಿ ಕಳ್ಳರನ್ನು ಓಡಿಸಿದಳು
ಮಹತಿ ಪ್ರಾಣಿಪಕ್ಷಿಗಳ ಸದ್ದನ್ನು ಅನುಕರಣೆ ಮಾಡಿ ಅವಳ ಸ್ನೇಹಿತರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಳು.
ಮಹತಿ: ಬೌ..ಬೌ..ವೌ..ಆಗ
ಬೆಕ್ಕಿನಮರಿ ಹಾಲು ಬೇಕು ಅಂತ ಕೂಗಿತು..ಮಿಯಾಂ ಮಿಯಾಂ.
ಮ: ಮನೆಯ ಪಕ್ಕದಲ್ಲೇ ಒಂದು ನದಿ ಹರಿಯುತ್ತಿತ್ತು.. ಸ್..
ಎಲ್ಲರೂ ಖುಷಿ ಮತ್ತು ಆಶ್ಚರ್ಯದಿಂದ ಅವಳ ಈ ಚಮತ್ಕಾರವನ್ನು ನೋಡುತ್ತಿದ್ದರು. ಸದ್ದು ಮಾಡುವಾಗ ಬಾಯಿಯನ್ನು ಹಿಗ್ಗಿಸಿ ಕುಗ್ಗಿಸಿದಾಗ ಅವಳಮುಖವೂ ವಕ್ರವಾಗುವುದನ್ನು ನೋಡುವಾಗ ಎಲ್ಲರಿಗೂ ತಮಾಷೆ ಎನ್ನಿಸಿ ನಗುತ್ತಿದ್ದರು. ಅವರೆಲ್ಲರ ಕೇಕೆ, ಚಪ್ಪಾಳೆಯಿಂದ ಮಹತಿ ಮತ್ತಷ್ಟು ಉತ್ಸಾಹದಿಂದ ಅನುಕರಣೆ ಮಾಡುತ್ತಿದ್ದಳು.
ಮಹತಿ: ಆಗ.. ಮರದ ಮೇಲೆ ಇದ್ದ ನವಿಲು ಹೀಗೆ ಕೂಗಿತು.. ಕೇಂ ಕೇಂ...
ಎಲ್ಲರೂ: ಏ.. ಸೂಪರ್ ಸೂಪರ್..
ಮ: ಆಗ ಒಂದು ಹುಲಿ ಘರ್ಜಿಸಿತು.. ಘರ್ರ್.....
ಅದನ್ನು ನೋಡಿ ಮರದ ಮೇಲೆ ಮಂಗ.. ಕಿ.ಕಿ..ಕಿ..ಕಿ..
ಎಲ್ಲರೂ: ಹ್ಹಹ್ಹಹ್ಹಾ..
ಅವಳ ಗುರುಗಳಿಗೂ ಅವಳ ಈ ಪ್ರತಿಭೆ ಇಷ್ಟವಾಗಿತ್ತು.
ಟೀಚರ್: ರೈಲು ಹೇಗೆ ಕೂಗುತ್ತದೆ ಮಹತಿ..?
ಮಹತಿ: ಕೂ..ಚುಚುಕ್ ಚುಚುಕ್..ಚುಚುಕ್ ಚುಚುಕ್..ಕೂ..
ಸ್ನೇಹಿತರು ಅವಳಲ್ಲಿ ಬೇರೆ ಬೇರೆ ಸದ್ದನ್ನು ಮಾಡುವಂತೆ ಕೇಳಿ ಕೇಳಿ ಖುಷಿಪಡುತ್ತಿದ್ದರು.
ಇದರ ಜೊತೆ ಮಹತಿಗೆ ಕೈಯ ನೆರಳಿನಿಂದ ಪ್ರಾಣಿಪಕ್ಷಿಗಳ ಆಕೃತಿಗಳನ್ನು ಗೋಡೆ ಮೇಲೆ ಮೂಡಿಸುವ ಆಟವೂ ತಿಳಿದಿತ್ತು.
ಅವಳ ಈ ಹವ್ಯಾಸಗಳಿಂದಾಗಿ ಮಹತಿ ಇಡೀ ಶಾಲೆಯಲ್ಲೇ ಜನಪ್ರಿಯಳಾಗಿದ್ದಳು.
ಒಂದು ದಿನ ಅವಳ ಅಪ್ಪ ಕೆಲಸದ ಸಲುವಾಗಿ ದೂರದ ಊರಿಗೆ ಹೊರಟರು.
ಅಪ್ಪ: ನಾನು ಬರೋದು ಒಂದು ವಾರ ಆಗುತ್ತದೆ. ಮನೆ ಕಡೆ ಜೋಪಾನ.
ಅಮ್ಮ: ಆಗಲಿ. ತಲುಪಿದ ಕೂಡಲೇ ಫೋನ್ ಮಾಡಿ.
ಅ: ಆಗಲಿ. ಮಹತಿ ಟಾಟಾ..
ಮಹತಿ: ಟಾಟಾ ಅಪ್ಪ.. ಬೇಗ ಬನ್ನಿ..
ಕಳ್ಳರು ಇದೇ ಸಮಯಕ್ಕೆ ಹೊಂಚುಹಾಕುತ್ತಿದ್ದರು.
ಕಳ್ಳ1 : ಒಳ್ಳೆಯ ಸಮಯ. ಈ ಮನೆಗೆ ಇಂದೇ ರಾತ್ರಿ ನುಗ್ಗೋಣ.
ಕಳ್ಳ೨: ಇಂದು ಬೇಡ. ಬಾಗಿಲು ಮುರಿಯಲು ಬೇಕಾದ ಹಾರೆ ಪಿಕಾಸಿ ಹಿಡಿದು ನಾಳೆ ಬರೋಣ. ಹೇಗಿದ್ದರೂ ಅವನು ಇನ್ನು ಬರೋದು ಆರೇಳು ದಿನಾದರೂ ಆಗುತ್ತದೆ.
ಮರುದಿನ ಸಂಜೆ.( ಮಹತಿ ಕಿಟಿಯಲ್ಲಿ ಓರೆಯಾಗಿ ನಿಂತು ಗಮನಿಸಿದಳು)ಅವಳಿಗೆ ಕತ್ತಲಲ್ಲಿ ಯಾರೋ ಓಡಿದಂತೆ ಕಾಣಿಸಿತು.
'ಓ ಕಳ್ಳರು!'
ಅವಳು ಅಮ್ಮನಿಗೆ ಗುಟ್ಟಾಗಿ ವಿಷಯ ತಿಳಿಸ್ತಾಳೆ.
"ಗಾಭರಿಯಾಗೋದು ಬೇಡ ಅಮ್ಮ. ನಾನೊಂದು ಉಪಾಯ ಮಾಡಿದ್ದೇನೆ."
ಅಮ್ಮನ ಕಿವಿಯಲ್ಲಿ ಹೇಳಿದಳು.
ಅವಳು ಅಪ್ಪನಂತೆ ದನಿ ಬದಲಾಯಿಸಿ ಮಾತಾಡತೊಡಗಿದಳು.
ಮ: ಮಹತೀ ಮಹತೀ ಇಲ್ಲಿ ಬಾ
ಮ: ಏನಪ್ಪಾ?
ಮ: ನನ್ನ ಕನ್ನಡಕ ಎಲ್ಲಿ ಮಗಳೇ?
ಮ: ಟಿವಿಯ ಮೇಲಿರಬೇಕು. ತಂದ್ಕೊಡ್ತೀನಿ ಅಪ್ಪಾ..
ಮ: ಆಗಲಿ..
ಆಗ ಅಮ್ಮ: ನಾನು ನಿಮಗೆ ಚಹಾ ಮಾಡಿ ಕೊಡಲೇ?
ಮ: ಆಯ್ತು ಮಾಡಿ ತಾ.
ಮಹತಿಯ ಅಮ್ಮ ಅಡುಗೆ ಮನೆಯಲ್ಲಿ ಚಹಾ ಮಾಡುವಂತೆ ನಟಿಸುತ್ತಾ ಪಾತ್ರೆಯ ಸದ್ದು ಮಾಡಿದಳು.
ಅಮ್ಮ: ತಗೊಳ್ಳಿ ಚಹಾ..ಅಂದಹಾಗೆ ಬರೋದು ಒಂದುವಾರ ಆಗುತ್ತೆ ಅಂತ ಹೇಳಿ ಇಂದೇ ಬಂದಿರಲ್ಲ?
ಮ: ಅಲ್ಲಿ ನನ್ನ ಕೆಲಸ ಬೇಗ ಬೇಗ ಮುಗಿಯಿತು.
ಇಂದೇ ಬಂದೆ. ನಿಮಗೆ ಫೋನ್ ಮಾಡಿ ತಿಳಿಸಲು ನೆಟ್‌ವರ್ಕ್ ಇರಲಿಲ್ಲ.
ಕಳ್ಳರಿಗೆ ಆಶ್ಚರ್ಯವಾಯಿತು. ಆದರೂ ಸಂದೇಹ ಪರಿಹರಿಸಿಕೊಳ್ಳೋಣ ಅಂತ ಕಿಟಿಯೊಂದರಲ್ಲಿ ಇಣುಕಿ ನೋಡಿದರು.
ಅಲ್ಲಿ ಗೋಡೆ ಮೇಲೆ ಅಪ್ಪನ ನೆರಳು ಕಾಣುತ್ತುತ್ತು. ಮಹತಿ ಕೈಬೆರಳುಗಳ ಸಹಾಯದಿಂದ ಗೋಡೆಯಲ್ಲಿ ಅಪ್ಪನ ಆಕೃತಿಯನ್ನು ಮೂಡಿಸಿ ಅಪ್ಪನಂತೆಯೇ ಮಾತಾಡುತ್ತುದ್ದಳು.
ಮಹತಿ ಅಪ್ಪನಂತೆ: ನಿನಗೆ ನಾನು ಬೇಗ ಬಂದದ್ದು ಖುಷಿಯಾಯ್ತಲ್ಲ ಮಹತಿ?
ಮ: ಹೌದಪ್ಪ. ನೀವು ಬೇಗ ಬಂದದ್ದು ಒಳ್ಳೆಯದಾಯ್ತು. ನನಗೆ ಕಳ್ಳರು ಬಂದರೆ ಅಂತ ಹೆದರಿಕೆ ಆಗಿತ್ತು.
ಅ: ನಾನು ಬಂದೆ ಅಲ್ವ? ಕಳ್ಳರು ಬರಲಿ, ಈ ದೊಣ್ಣೆಯಿಂದ ತಲೆಒಡೆದುಬಿಡುತ್ತೇನೆ.
ಹ್ಹ ಹ್ಹ ಹ್ಹ..
ಕಳ್ಳರಿಗೆ ಭಯವಾಗಿ ಅಲ್ಲಿಂದ ಓಡಿಹೋದರು.
ಮರುದಿನ ತರಗತಿಯಲ್ಲಿ ಮಹತಿ ಕಳ್ಳರನ್ನು ಓಡಿಸಿದ ಕತೆಯನ್ನು ಅಭಿನಯಿಸಿ ಹೇಳಿದಾಗ ಎಲ್ಲರೂ ಬಿದ್ದುಬಿದ್ದು ನಕ್ಕರು.

Comments
Post a Comment