ನಿಜವಾದ ರಾಜ
ಮಹಾಪುರ ಎಂಬ ಸಾಮ್ರಾಜ್ಯ. ಅದಕ್ಕೊಬ್ಬ ರಾಜ. ಹೆಸರು ಶಕ್ತಿವರ್ಮ. ಒಂದು ದಿನ ಆಸ್ಥಾನದಲ್ಲಿ ರಾಜ್ಯದ ಅಭಿವೃದ್ಧಿಯ ಮಾತುಕತೆ ನಡೆಯುತ್ತಿತ್ತು. ಪಟ್ಟಣ ಪಟ್ಟಣಗಳನ್ನು ಜೋಡಿಸುವಂತಹ ಅಗಲವಾದ ರಾಜರಸ್ತೆಯೊಂದು ಆ ರಾಜ್ಯಕ್ಕೆ ಬೇಕಾಗಿತ್ತು. ಅದನ್ನು ಮಾಡುವ ಬಗ್ಗೆ ಮಂತ್ರಿಮಡಲದಲ್ಲಿ ವಿಷಯ ಚರ್ಚೆಯಾಗಿ ರಾಜ ಒಂದು ವಾರದೊಳಗಾಗಿ ಕೆಲಸ ಆರಂಭವಾಗುವಂತೆ ಆಜ್ಞೆ ಹೊರಡಿಸಿದ. ರಾಜನ ಸಮ್ಮುಖದಲ್ಲಿ ಸಮಾಲೋಚನೆಯಾಗಿ ರಸ್ತೆನಿರ್ಮಾಣಕ್ಕೆ ಸೂಕ್ತ ವ್ಯಕ್ತಿಯೊಬ್ಬನನ್ನು ನೇಮಿಸಲಾಯಿತು. ಅವನ ಹೆಸರು ಹೃದಯದೇವ.
ಹೃದಯದೇವ ಒಳ್ಳೆಯವನಾಗಿದ್ದ. ಆದರೆ ಆಸ್ಥಾನದ ಮಂತ್ರಿಗೆ ಪೂರ್ಣ ಹಿಡಿಸಿರಲಿಲ್ಲ.
ಮಂತ್ರಿ ಕುಶಲಮತಿ ಒಳ್ಳೆಯವನೇ. ಆದರೆ ತುಸು ಆಸೆಬುರುಕನಾಗಿದ್ದ. ರಾಜನಿಗೆ ತಿಳಿಯದಂತೆ ಅಡ್ಡದಾರಿಯಿಂದ ಎರಡು ಕಾಸು ಹೆಚ್ಚು ಗಳಿಸುವ ಮನಸ್ಸಿನವನು. ರಸ್ತೆ ನಿರ್ಮಿಸುವ ಕೆಲವು ಬೇರೆ ಕೆಲಸಗಾರರು ಮಂತ್ರಿಗೆ ಹಣದ ಆಸೆ ತೋರಿಸಿ ಆ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಯತ್ನಿಸಿದರು.
ಆದರೆ ರಾಜನ ಕಟ್ಟುನಿಟ್ಟಿನ, ವಿಚಾರವಂತಿಕೆಯ ನಡೆ ಅದಕ್ಕೆ ಇಂಬು ನೀಡದೆ ರಸ್ತೆ ನಿರ್ಮಾಣದ ಕೆಲಸ ಹೃದಯದೇವನಿಗೇ ವಹಿಸಲಾಗಿತ್ತು. ಆದರೂ ಮಂತ್ರಿ ಸೂಕ್ತ ಸಮಯಕ್ಕೆ ಕಾಯುತ್ತಿದ್ದ. ಮಂತ್ರಿಯನ್ನು ಭೇಟಿಯಾಗಿದ್ದ ಕೆಲಸಗಾರರು ರಾತ್ರಿ ನಿದ್ದೆ ಬಾರದೆ ಹೊರಳಾಡಿದರು.
ರಸ್ತೆ ನಿರ್ಮಾಣದ ಸ್ಥಳ ವೀಕ್ಷಣೆಗೆ
ಹೃದಯದೇವ ರಾತ್ರಿಸಂಚಾರ ಕೈಗೊಂಡ. ರಸ್ತೆ ಸಾಗುವ ಹಾದಿಯಲ್ಲೊಂದು ದೊಡ್ಡದಾದ ಮರ ಇತ್ತು. ಕೊಕ್ಕರೆಯ ಕುಟುಂಬದ ಸಾವಿರಾರು ಹಕ್ಕಿಗಳು ಆ ಮರದಲ್ಲಿ ಆಶ್ರಯ ಪಡೆದಿದ್ದವು.
ಹೃದಯದೇವ ರಾತ್ರಿ ಸ್ಥಳವೀಕ್ಷಣೆ ಮಾಡುತ್ತಾ ಆ ಮರದಡಿ ಬಂದು ನಿಂತಾಗ ಅವನಿಗೆ ಮರದ ಮೇಲೆ ಕೊಕ್ಕರೆ ಕುಟುಂಬ ಮಾತನಾಡುವುದು ಕೇಳಿಸಿತು.
"ಅಯ್ಯೋ, ರಾಜ ಈ ಸ್ಥಳವನ್ನು ಹಾದುಹೋಗುವಂತೆ ರಸ್ತೆ ನಿರ್ಮಿಸಲು ಹೊರಟಿದ್ದಾನೆ. ನಾವೀಗ ಎಲ್ಲಿಗೆ ಹೋಗೋಣ?
" ಎಲ್ಲಿಗೆ ಅಂತ ಹೋಗೋದು. ಪಕ್ಕದ ರಾಜ್ಯದಲ್ಲಿ ನಾವು ವಾಸವಾಗಿದ್ದ ಮರ ಅಲ್ಲಿನ ಭವನ ನಿರ್ಮಾಣಕ್ಕೆ ಅಂತ ಕಡಿದಾಗ ನಮ್ಮ ಅನೇಕ ಬಂಧುಗಳು ನೆಲಕ್ಕೆ ಬಿದ್ದು ಸತ್ತುಹೋದರು. ಹೇಗೋ ಬಚಾವಾಗಿ ಇಲ್ಲಿಗೆ ಬಂದೆವು. ಈಗ ಈ ಮರ ಉರುಳಿದರೆ..
-ಉರುಳಿದರೆ ನಮಗೆ ದೇವರೇ ಗತಿ. ನಮ್ಮ ಬಳಗದ ಪುಟ್ಟ ಮಕ್ಕಳಂತೂ ಹಾರಲಾರವು. ಅಲ್ಲದೇ ನಿನ್ನೆಯಷ್ಟೇ ಈ ಮರದಲ್ಲಿ ಹತ್ತು ಕೊಕ್ಕರೆ ಅಕ್ಕಂದಿರು ಮೊಟ್ಟೆಯಿಟ್ಟಿದ್ದಾರೆ. ಹನ್ನೆರಡು ಮರಿಗಳು ಮೊನ್ನೆಯಷ್ಟೇ ಕಣ್ಣುಬಿಟ್ಟಿದ್ದಾವೆ.
-ಅಯ್ಯೋ. ಮನುಷ್ಯರಾದರೆ ಮಕ್ಕಳನ್ನು ಕಂಕುಳಲ್ಲಿ ಅವುಚಿ, ಬೆನ್ನಿಗೆ ಕಟ್ಟಿಕೊಂಡು ಓಡಿ ಬದುಕಿಯಾರು. ನಮಗೆ ಸಾಧ್ಯವೇ? ಅಲ್ಲದೆ ನಾನೀಗ ಬಸುರಿ ಬೇರೆ. ನನಗೂ ಹಾರಲಾಗದು.
ಇನ್ನೇನು ಮಾಡೋಣ.
ದೇವರೇ..!"
ಹೃದಯದೇವ ಈ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ವಿಚಲಿತನಾದ. ಮನಸ್ಸು ಕರಗಿತು.
ಮರುದಿನ ಬಿರುಸಾಗಿ ಹೆಜ್ಜೆ ಹಾಕುತ್ತಾ ಆಸ್ಥಾನಕ್ಕೆ ಹೋಗಿ ರಾಜನನ್ನು ಭೇಟಿಯಾದ.
ರಾಜ-ಹೃದಯದೇವ, ನಮ್ಮ ರಸ್ತೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿದಿರಾ?
-ಹೌದು ರಾಜಾ..
-ಭೇಷ್, ಇಂದೇ ಕೆಲಸ ಆರಂಭವಾಗಲಿ.
-ಆರಂಭಿಸಬಹುದಿತ್ತು. ಆದರೆ..
-ಆದರೆ? ಏನಿದು ಅಪಶಕುನ?
-ಅಲ್ಲೊಂದು ದೊಡ್ಡ ಮರ ಆ ಹಾದಿಯಲ್ಲೇ ಇದೆ..
-ಆಗಲಿ. ಅದಕ್ಕೇನು ಯೋಚನೆ. ಕಡಿಸಿಬಿಡಿ.
-ಆದರೆ ರಾಜ?
-ಮತ್ತೆ ಆದರೆ? ಏನು ತೊಂದರೆ?
-ಆ ಮರದಲ್ಲಿ ಸಾವಿರಾರು ಕೊಕ್ಕರೆಗಳು ಮರಿಗಳ ಸಹಿತ ಗೂಡುಕಟ್ಟಿಕೊಂಡು ವಾಸವಾಗಿದ್ದಾವೆ. ಪಾಪ, ಮರ ಕಡಿದರೆ ಅವು ಎಲ್ಲಿಗೆ ಹೋಗಬೇಕು?
ಆಗ ಮಂತ್ರಿ ಮಧ್ಯೆ ಬಾಯಿಹಾಕಿದ.
ಮಂತ್ರಿ- ಎಲ್ಲಾದರೂ ಹೋಗಲಿ. ಆ ಚಿಂತೆ ನಿಮಗೇಕೆ? ಮನುಷ್ಯರಿಗೆ ಮಾಡುವಂತೆ ಹಕ್ಕಿಗಳಿಗೂ ಪುನರ್ವಸತಿ ಮಾಡಿಕೊಡಲಾಗುತ್ತದೆಯೇ?
-ಆದರೆ ಮರ ಉರುಳಿದರೆ ಅವೆಲ್ಲಾ ಬದುಕಿ ಉಳಿಯಲಾರವು.
ಮಂತ್ರಿ-ಛೆ, ರಾಜ್ಯದ ಅಭಿವೃದ್ಧಿಯನ್ನು ನೋಡುವಾಗ ಇಂಥ ಚಿಕ್ಕ ಸಂಗತಿಗೆ ತಲೆಕೆಡಿಸಲಾಗದು. ಒಂದು ಕಡೆ ಹೆಚ್ಚು ಒಳ್ಳೆಯದು ಆಗುವಾಗ ಒಂದು ಕಡೆ ತುಸು ತೊಂದರೆಯಾದರೆ ನಷ್ಟವಿಲ್ಲ.
ಹೃ- ಮಹಾರಾಜರು ಕ್ಷಮಿಸಬೇಕು. ನನ್ನಿಂದ ಈ ಕಾರ್ಯ ಮಾಡಲಾಗದು. ಮನಸ್ಸು ಒಪ್ಪದು.
ಆದರೆ ಅದರ ಬದಲು..
ರಾಜ- ಅದರ ಬದಲು..?
-ಆ ಮರವನ್ನು ಸುತ್ತುವರೆದು ಹೋಗುವಂತೆ ರಸ್ತೆ ನಿರ್ಮಿಸಿದರೆ..
ಮಂತ್ರಿ- ಅದು ಹೇಗೆ ಆಗುತ್ತದೆ. ನಮ್ಮ ಮಹಾರಾಜರ ಯೋಜನೆಯನ್ನು ಮೀರುವುದೆಂದರೆ ರಾಜಾಜ್ಞೆಯನ್ನೂ ಮೀರಿದಂತೆ, ರಾಜರನ್ನು ಅಗೌರವಿಸಿದಂತೆ..
ರಾಜನಿಗೆ ಗೊಂದಲವಾಯಿತು. ಹೃದಯದೇವನ ಯೋಚನೆ ಧರ್ಮಪರವೇ ಆದರೂ ತನ್ನ ಯೋಜನೆಯನ್ನು ಕೈಬಿಡುವಂತಿಲ್ಲ. ಮಂತ್ರಿ ಅನ್ನುವಂತೆ ರಾಜನ ಆಣತಿಯನ್ನು ಮೀರಿದರೆ ರಾಜನಿಗೇನು ಬೆಲೆ? ರಾಜ ಕೇಳಿದ.
ರಾ- ಮಂತ್ರಿಗಳೇ ಈಗೇನು ಮಾಡೋಣ.
ಮಂ-ಈ ವ್ಯಕ್ತಿಯನ್ನು ಈಗಲೇ ಕೆಲಸದಿಂದ ವಜಾಗೊಳಿಸಿ ಬೇರೊಬ್ಬ ಸೂಕ್ತ ವ್ಯಕ್ತಿಯನ್ನು ಆ ಕೆಲಸಕ್ಕೆ ನೇಮಿಸೋಣ. ರಾಜಸಮಯವನ್ನು ಹಾಳು ಮಾಡಿದಕ್ಕಾಗಿ ಈತನಿಗೆ ದಂಡ ವಿಧಿಸೋಣ.
ರಾ- ಏನಂತೀರಿ ಹೃದಯದೇವರೇ?
- ನನಗೇನೂ ತೋಚದು ಸ್ವಾಮಿ. ತಾವು ಬಯಸಿದರೆ ನಾನು ಶಿಕ್ಷೆಯನ್ನು ಅನುಭವಿಸುತ್ತೇನೆಯೇ ಹೊರತು. ಮರ ಕಡಿಯಲಾರೆ.
-ಮಂತ್ರಿಗಳೇ, ಜುಲ್ಮಾನೆ ಏನೂ ಬೇಡ. ಈ ಕೆಲಸಕ್ಕೆ ಬೇರೊಬ್ಬ ವ್ಯಕ್ತಿಯನ್ನು ನೋಡೋಣ.
ಮಂತ್ರಿಗೆ ಖುಷಿಯಾಯಿತು.
ರಾ- ಹೃದಯದೇವರೇ, ನಿಮ್ಮ ಹೃದಯ ಒಳ್ಳೆಯದಿದೆ. ಆದರೆ ರಾಜ್ಯದ ಅಭಿವೃದ್ಧಿ ಗೆ ಅದಷ್ಟೇ ಸಾಲದು. ತಲೆಯೂ ಬೇಕು. ನಿಮಗೆ ಒಂದು ದಿನದ ಸಮಯ ನೀಡಿದ್ದೇವೆ. ಬೇಕಾದರೆ ರಾತ್ರಿಯಿಡೀ ಯೋಚಿಸಿ. ನಾಳೆಯ ಒಳಗಾಗಿ ನೀವು ಸೂಕ್ತ ಪರಿಹಾರ ಹುಡುಕಿದರೆ ಸಂತೋಷ. ಇಲ್ಲವಾದರೆ..
- ತಿಳಿಯಿತು..ಸ್ವಾಮಿ.
"ಅರೆ, ಕೈಗೆ ಬಂದರೂ ತುತ್ತು ಬಾಯಿಗೆ ಬರುತ್ತಿಲ್ಲವಲ್ಲಾ.." ಅಂತ ಮಂತ್ರಿ ಕೈಕೈ ಹಿಸುಕಿಕೊಂಡ. ಗಡ್ಡ ತುರಿಸಿಕೊಂಡ.
ಹೃದಯದೇವ ಚಿಂತೆಯಿಂದ ಮನೆ ಸೇರಿದ.
ಅವನ ಐದರ ಹರೆಯದ ಪುಟ್ಟ ಮಗಳು ಓಡಿ ಬಂದು ಅಪ್ಪನ ತೊಡೆಯೇರಿದಳು.ಆದರೆ ಎಂದಿನಂತೆ ಅಪ್ಪ ಮುದ್ದಿಸಲಿಲ್ಲ. ಮಗಳಿಗೆ ಬೇಸರವೆನಿಸಿತು. ಮಗಳ ಮುಖವನ್ನು ನೋಡಿದ ಹೃದಯದೇವ ನಡೆದ ಸಂಗತಿಯನ್ನು ತಿಳಿಸಿದ.
ಅವಳಿಗ, ತನ್ನ 'ಅಪ್ಪ- ಒಳ್ಳೆಯ ಅಪ್ಪಾ' ಅನ್ನಿಸಿ ಖುಷಿಯಾಯಿತು. ಅಪ್ಪನ ಬಗ್ಗೆ ಅಭಿಮಾನ ಹೆಚ್ಚಿತು.
ಅಪ್ಪನಿಗೆ ಸಹಾಯ ಮಾಡಬೇಕು. ಆದರೆ ಹೇಗೆ ಅಂತ ಯೋಚಿಸಿದಳು, ಏನೂ ತೋಚಲಿಲ್ಲ.
-ಅಪ್ಪಾ ನಾಳೆ ರಾಜನಿಗೆ ಏನು ಹೇಳುತ್ತೀರಿ?
-ಗೊತ್ತಿಲ್ಲ ಮಗಳೇ,ಈ ರಾತ್ರಿ ಏನಾದರೂ ಪವಾಡ ಸಂಭವಿಸಬೇಕಷ್ಟೆ.
ಮಗಳು "ಹೌದು ಹೌದು" ಅಂದಳು! ಅವರೆಲ್ಲಾ ನಿದ್ದೆ ಮಾಡಲು ಹೋದರು.
ಹೃದಯದೇವನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಮಗಳು ನಿದ್ದೆ ಮಾಡಲಿಲ್ಲ.
ಮುಂಜಾನೆ ಹೃದಯದೇವನಿಗೆ ಎಚ್ಚರವಾದಾಗ ತಡವಾಗಿತ್ತು. ನೋಡುತ್ತಾನೆ, ಮಗಳು ಹಾಸಿಗೆಯಲ್ಲಿರಲಿಲ್ಲ.
"ಮಗಳೇ, ಮಗಳೇ.. !"
ಮಗಳು ಮನೆಯಲ್ಲೂ ಇರಲಿಲ್ಲ!
ಹೃದಯದೇವ ಓಡುತ್ತೋಡುತ್ತಾ ಅರಮನೆಗೆ ತಲುಪಿದ. ಅಸ್ಥಾನದಲ್ಲಿ ಜನ ಸೇರಿದ್ದರು. ಅವನಿಗೆ ಜನಸಂದಣಿಯಲ್ಲಿ ತೂರಿಕೊಂಡು ಒಳಬರಲು ಕಷ್ಟವಾಗುತ್ತಿತ್ತು.
ಒಂದು ಕಡೆ ಮಗಳನ್ನು ಭಟರ ನಡುವೆ ನಿಲ್ಲಿಸಲಾಗಿತ್ತು. ರಾಜ ಸಿಂಹಾಸನದಲ್ಲಿ ಕುಳಿತುಕೊಂಡಿದ್ದ. ಮಂತ್ರಿ ಕೋಪದ ಕಣ್ಣುಗಳಿಂದ ಕೂಡಿದ್ದ.
ರಾಜ: ಮಂತ್ರಿಗಳೇ ವಿಷಯವೇನು? ಈ ಬಾಲಕಿ ಹೃದಯದೇವರ ಮಗಳೆಂದು ಹೇಳಿದಿರಿ. ಈಕೆ ಯಾಕೆ ಇಲ್ಲಿದ್ದಾಳೆ. ಹೃದಯದೇವ ಎಲ್ಲಿ? ನೀವು ಯಾಕೆ ಕೋಪಗೊಂಡಿದ್ದೀರಿ?
ಮಂತ್ರಿ- ಏನೂಂತ ಹೇಳಲಿ ರಾಜ. ಇವಳು ಬಾಲಕಿಯಲ್ಲ, ರಾಕ್ಷಸಿ!
ರಾ- ಕೂಗಾಡಬೇಡಿ. ವಿಷಯ ಸರಿಯಾಗಿ ತಿಳಿಸಿರಿ.
ಮಂತ್ರಿ- ರಾಜಾ, ಮನೆಯಲ್ಲಿ ನನಗೊಬ್ಬ ಪುಟ್ಟ ಮಗನಿದ್ದಾನೆ. ನನಗೆ ಅವನೆಂದರೆ ಬಹಳ ಪ್ರೀತಿ. ಅವನಿಗಾಗಿ ನಾನು ಸುಂದರ ಹೂಗಳ ತೋಟವೊಂದನ್ನು ಹಿತ್ತಿಲಲ್ಲಿ ಮಾಡಿದ್ದೆ. ಬೆಳಗಾಗುತ್ತಲೇ ನೂರು ಹೂಗಳು ಅರಳುತ್ತಿದ್ದವು. ಸಾವಿರ ಚಿಟ್ಟೆಗಳು ಹಾರಾಡುತ್ತಿದ್ದವು. ಬೆಳಗೆ ಏಳುತ್ತಲೇ ನನ್ನ ಮುದ್ದು ಕಂದಮ್ಮ ಹೂಗಳನ್ನು ನೋಡುತ್ತಿದ್ದ. ಅವನಿರುವ ಕೋಣೆಯ ಕಿಟಿಕಿಯ ಬಳಿಯೇ ಆ ತೋಟವಿತ್ತು. ಬಣ್ಣ ಬಣ್ಣದ ಚಿಟ್ಟೆಗಳು ಹಾರುವುದನ್ನು ನೋಡುತ್ತಾ ಅವನು ನಗುತ್ತಿದ್ದ. ಚಪ್ಪಾಳೆ ತಟ್ಟುತ್ತಾ ಖುಷಿಪಡುತ್ತಿದ್ದ.
ಆದರೆ ಇಂದು ಬೆಳಗಾಗುವುದರಲ್ಲಿ ನೋಡುವುದೇನು.. ಈ ರಕ್ಕಸೀ..
ರಾಜ- ಹಾ ಹಾ. ಆಯಾಸ ಮಾಡಿಕೊಳ್ಳಬೇಡಿ. ನೀರು ಕುಡಿಯಿರಿ, ಮಾತು ಮುಂದುವರಿಸಿ.
ಮಂತ್ರಿ- ಬೆಳಗಾಗಿ ನೋಡುತ್ತೇನೆ ನನ್ನ ಮುದ್ದು ಕಂದ ಆಕಾಶ ಬಿರಿಯುವಂತೆ ಅಳುತ್ತಿದ್ದಾನೆ.
ಈ ಹುಡುಗಿ ರಾತ್ರಿ ಅದೆಷ್ಟೋ ಹೊತ್ತಿಗೆ ಬಂದು ನನ್ನ ಕಂದನ ಸುಂದರ ತೋಟದ ಗಿಡಗಳ ಹೂಗಳನ್ನೆಲ್ಲಾ ಕಿತ್ತು ಕಿತ್ತು ಹಾಳು ಮಾಡುತ್ತಿದ್ದಳು. ಕಿತ್ತು ನೆಲಕ್ಕೆಸೆದು ತುಳಿದು ಅಜ್ಜಿಬಜ್ಜಿ ಮಾಡುತ್ತಿದ್ದಳು. ಅವಳು ಹೂಕುಂಡವೊಂದನ್ನು ಎತ್ತಿ ಇನ್ನೇನು ನೆಲಕ್ಕೆ ಅಪ್ಪಳಿಸಬೇಕು, ಅದೃಷ್ಟವಶಾತ್ ನನ್ನ ಕೈಗೆ ಸಿಕ್ಕಿಬಿದ್ದಳು.
ಇದು ನಡೆದ ಕತೆ. ನನ್ನ ಮಗ ಇನ್ನೂ ಅಳುತ್ತಲೇ ಇದ್ದಾನೆ. ನನ್ನ ಹೆಂಡತಿ ಸಮಾಧಾನ ಮಾಡಲಾಗದೆ ಅವಳೂ ಅಳುತ್ತಿದ್ದಾಳೆ. ನನಗೂ ಅಳು ಬರುವ ಮುಂಚೆ ಈಕೆಯನ್ನು ಇಲ್ಲಿಗೆ ಎಳೆದುಕೊಂಡು ಬಂದೆ.
ರಾಜ- ಓಹೋ. ಇದು ಸಂಗತಿ. ಈಗ ಹೃದಯದೇವ ಎಲ್ಲಿ?
ಆಗ ಹೃದಯದೇವ ಜನಸಂದಣಿಯನ್ನು ದಾಟಿ ನಿಧಾನ ಒಳಗೆ ಬಂದ
ಮಂತ್ರಿ- ಅದೋ ನೋಡಿ ನಿಮ್ಮ ಹೃದಯಹೀನ ದೇವ. ನಿನ್ನೆ ರಸ್ತೆ ನಿರ್ಮಾಣದ ವಿಷಯದಲ್ಲಿ ನನ್ನ ಮೇಲೆ ಬೇಸರವಾಗಿ, ಕೋಪಗೊಂಡು ಮಗಳ ಕೈಲಿ ಈ ಹಾಳು ಕೆಲಸ ಮಾಡಿಸಿದ್ದಾನೆ. ಈಗ ನೋಡಿ ಏನೂ ತಿಳಿಯದ ದನದ ಹಾಗೆ ಬರುತ್ತಿದ್ದಾನೆ..
ರಾಜ- ಓಹೋ ಹೃದಯದೇವರು. ಬನ್ನಿ, ಏನಿದು ರಾದ್ಧಾಂತ. ಯಾಕೆ ಹೀಗೆ ಮಾಡಿದಿರಿ?
ಹೃ- ಈ ರಾಜ್ಯದ ಮೇಲಾಣೆ. ನನಗೇನೂ ತಿಳಿಯದು ಸ್ವಾಮಿ. ನಾನು ಬೆಳಗೆದ್ದು ನೋಡುವಾಗ ನನ್ನ ಮಗಳು ಮನೆಯಲ್ಲಿ ಕಾಣಿಸಲಿಲ್ಲ. ಆಸ್ಥಾನ ಸೇರಬೇಕಾದ ಸಮಯವಾಗಿತ್ತು. ಗಡಿಬಿಡಿಯಲ್ಲೇ ಓಡುತ್ತಾ ಬಂದೆ. ಇಲ್ಲಿ ನೋಡಿದರೆ..
ರಾಜ- ಮಂತ್ರಿಗಳೇ ಏನು ಮಾಡೋಣ?
ಮಂತ್ರಿ- ಈ ಹುಡುಗಿಯ ಬೆನ್ನಿಗೆ ಬಾರುಕೋಲಿನಿಂದ ಸಾಕು ಸಾಕೂ ಅನ್ನುವಷ್ಟು ಬಡಿಯಬೇಕು. ಹೃದಯದೇವನ ತಲೆಯನ್ನು ತೆಗೆಯಬೇಕು.
ರಾಜ: ಏ ಬಾಲಕಿ, ನೀನೇನು ಹೇಳುತ್ತಿ?
ಮಗಳು- ರಾಜರಿಗೆ ಪ್ರಣಾಮಗಳು. ನನ್ನದು ತಪ್ಪಾಯಿತು. ಆದರೆ ನಾನು ಮಂತ್ರಿಗಳ ಹೂದೋಟದ ಹೂವುಗಳನ್ನೆಲ್ಲ ಕಿತ್ತೆ. ಹೂವೆಲ್ಲ ನಾಶವಾಯಿತು. ಅಷ್ಟಕ್ಕೇ ಅವರ ಮಗುವೂ ತಾಯಿಯೂ ದುಃಖಿತರಾದರೆ.., ಅದೆಷ್ಟೋ ಕಾಲದಿಂದ ಮಕ್ಕಳು ಮರಿಗಳೊಂದಿಗೆ ವಾಸಿಸುತ್ತಿದ್ದ ಹಕ್ಕಿಗಳ ಮರವೇ ನಾಶವಾದರೆ, ಅವುಗಳ ಮರಿಗಳು ನಾಶವಾದರೆ ಆ ಹಕ್ಕಿಗಳೆಷ್ಟು ದುಃಖಿತರಾಗಬೇಡ? ನಾನು ತೋಟದ ಹೂ ಹಾಳುಮಾಡಿದ್ದಕ್ಕೆ ನನ್ನ ತಂದೆಯ ತಲೆಯನ್ನು ತೆಗೆಯಬೇಕು ಅಂತಾದರೆ, ಹಕ್ಕಿಗಳ ಬದುಕು ಹಾಳು ಮಾಡಲು ಹೊರಟವರ ತಲೆಯನ್ನು ಏನು ಮಾಡಬೇಕು? ಮಹಾರಾಜರು ಕ್ಷಮಿಸಬೇಕು.
ರಾಜ: ಭಲೇ ಮಗು! ನಿನ್ನ ಯೋಚನೆ ನ್ಯಾಯದಿಂದ ಕೂಡಿದೆ. ನೀನು ನನ್ನನ್ನು ದೊಡ್ಡದೊಂದು ಗೊಂದಲದಿಂದ ಪಾರುಮಾಡಿದೆ. ಮಂತ್ರಿಗಳೇ ಯೋಚಿಸಬೇಡಿ, ನಿಮ್ಮತೋಟಕ್ಕೇನಾದರೂ ಹಾನಿಯಾಗಿದ್ದರೆ ಅದನ್ನು ನಮ್ಮ ಖರ್ಚಿನಲ್ಲಿ ಮರುರೂಪಿಸೋಣ.
ಹೃದಯದೇವರೇ, ಈ ರಸ್ತೆ ನಿರ್ಮಾಣದ ಕೆಲಸದಲ್ಲಿ ನೀವು ಮುಂದುವರಿಯಿರಿ. ಈ ಕೆಲಸಕ್ಕೆ ನಿಮ್ಮನ್ನು ಆಯ್ಕೆ ಮಾಡಿದ್ದು ಸರಿಯಾಗಿಯೇ ಇದೆ ಅಂತ ನಿರೂಪಿತವಾಯ್ತು. ನಿಮ್ಮಂತೆ ನಿಮ್ಮಮಗಳೂ ಹೃದಯವಂತಳೇ ಸರಿ.
ಎಲ್ಲರೂ ಇಲ್ಲಿ ಕೇಳಿ. ನಾಡಿನ ಯೋಗಕ್ಷೇಮ ಅಂದರೆ ಅದು ಕೇವಲ ಜನರ ಯೋಗಕ್ಷೇಮ ಮಾತ್ರವಲ್ಲ. ಅಲ್ಲಿರುವ ಪ್ರಾಣಿ- ಪಕ್ಷಿ , ಮರ ಗಿಡ ಭೂಮಿ, ಸಕಲ ಸಂಕುಲದ, ಜೀವರಾಶಿಗಳ ಯೋಗಕ್ಷೇಮ. ಎಲ್ಲರ ಕ್ಷೇಮವನ್ನು ಬಯಸಿ ಯೋಚಿಸಿ ಕೆಲಸಮಾಡುವವನೇ ನಿಜವಾದ ರಾಜ.
ಯಾರಲ್ಲಿ, ಈ ಮಗುವಿಗೆ ಕೊಡಲು ಕೈತುಂಬಾ ಬಹುಮಾನಗಳನ್ನು ತನ್ನಿ!

Comments
Post a Comment