ಬೊಮ್ಮಯ 2
ಒಂದು ಮುಸ್ಸಂಜೆ.
ತಂದನಿ ತಾನೋ..ತಾನಿ ತಂದಾನೋ..
ಅವಲಕ್ಕಿ ಎಲ್ಲ ಬೊಮ್ಮ ತಿಂದಾನೋ..
ಅಜ್ಜಿ ಬಾವಿಯಿಂದ ನೀರೆಳೆಯುತ್ತಾಳೆ.
ಅಯ್ಯೋ.. ಸೊಂಟ..
ಸೊಂಟ ಉಳುಕಿ , ಅಜ್ಜಿ ನೆಲದಲ್ಲಿ ಕುಳಿತುಕೊಳ್ಳುತ್ತಾಳೆ.
ಅಯ್ಯೋ ಸೊಂಟ ಉಳುಕಿತು.
ಕೊಡ ಹಗ್ಗ ಬಾವಿಗೆ ಬೀಳುತ್ತದೆ.
ಸರ್ರ್... ಢುಳುಂ..!
ಅಯ್ಯೋ..
ಅಯ್ಯೋ, ನೀರಿಗೆ ಬಿದ್ದ ಸದ್ದು, ಅಜ್ಜೀ..(ಅಜ್ಜಿ ಬಾವಿಗೆ ಬಿದ್ದರಾ..?) ಓಡಿ ಬರ್ತಾನೆ.
ನೋಡ್ತಾನೆ ಬೆನ್ನು ಬಾಗಿಸಿ ವಕ್ರವಾಗಿ ಅಜ್ಜಿ ಕೂತಿದೆ
ಅಜ್ಜೀ...(ಅಬ್ಬ ಸದ್ಯ ಅಂಥದ್ದೇನೂ ಆಗಿಲ್ಲ)
ಏನಾಯ್ತಜ್ಜೀ..
ಅಜ್ಜಿ- ಸೊಂಟ ಉಳುಕಿ ಚುಳುಕ್ ಚುಳುಕ್..
ಹಗ್ಗ ಕೊಡ ಬುಳುಕ್ ಬುಳುಕ್..
ನೋಡ್ತಾನೆ. ಕೊಡ ಅರ್ಧ ಮುಳುಗಿ ತೇಲುತ್ತಿತ್ತು.
ಛೆ!
ಒಳಗೆ ಕುಡಿಯಲು ನೀರಿಲ್ಲ ಮಗಾ?
ನೀನ್ಯಾಕೆ ನೀರೆತ್ತಲು ಹೋಗಬೇಕಿತ್ತು. ನನ್ನಲ್ಲಿ ಹೇಳಿದ್ದರೆ ನಾನು ತರುತ್ತಿದ್ದೆ ಅಲ್ವ?
ಮನೆಯಲ್ಲಿ ಹೆಣ್ಣುಮಗಳಿದ್ದಿದ್ರೆ ನನಗೆ ಈ ಕಷ್ಟ ಬರ್ತಿರಲಿಲ್ಲ ಮಗಾ!
ಬಾ. ಈಗ ಕತ್ತಲಾಯಿತು. ನಾಳೆ ಬೆಳಗ್ಗೆ ಬಾವಿಗೆ ಇಳಿದು ಕೊಡ ಎತ್ತಿ ಕೊಡ್ತೇನೆ.
ಅಜ್ಜಿ- ಹೇಗೆ ಬಾವಿಗೆ ಇಳಿಯೋದು? ಹಗ್ಗವೂ ಒಳಗೆ ಬಿದ್ದಿದೆ ಅಲ್ವ?
ಬೊ: ಚಿಂತಿಸಬೇಡ.ಏನಾದರೂ ಉಪಾಯ ಯೋಚಿಸ್ತೇನೆ. ಈಗ ಬಾ.
ರಾತ್ರಿ ಬೊಮ್ಮಯ ಯೋಚಿಸ್ತಾ ಮಲಗಿರುವಾಗ..
'ಗುಟಕ್.ಗುಟಕ್..'
ಅರೇ, ಏನದು ಸದ್ದು?
ಹೋಗಿ ನೋಡ್ತಾನೆ.
ಓ ಅಜ್ಜಿಗೆ ಬಾಯಾರಿಕೆ ಆಗಿದೆ. ನೀರು ಕುಡಿದರೆ ಸರಿಯಾಗ್ತದೆ.. ನೀರಿನ ಪಾತ್ರೆ ನೋಡ್ತಾನೆ. ಬರಿದು. ಓಹ್.
ಅಜ್ಜಿಯ ಗುಟಕ್ ಜಾಸ್ತಿ ಆಗ್ತದೆ.
"ಛೆ!
ನಿಲ್ಲಿಸದಿದ್ರೆ ಗುಟಕ್ ಗುಟಕ್ ..ಬೆಳಗಾಗುವಾಗ ಅಜ್ಜಿ ಗೊಟಕ್ ಗೊಟಕ್!."
ಅಯ್ಯೋ..! ಈಗಲೇ ಬಾವಿಯಿಂದ ಕೊಡ ಎತ್ತಬೇಕು.
ಮಗಾ ಎಲ್ಲಿಗೆ?
ಕೊಡ ತೆಗೆಯಬೇಕು ಈಗಲೇ..
ಬೆಳಗ್ಗೆ ತೆಗೆಯುವಿಯಂತೆ..
ಇಲ್ಲ ಇಲ್ಲ ಈಗಲೇ ತೆಗೀತೇನೆ.
ಕತ್ತಲಲ್ಲಿ ಬಾವಿ ಇಣುಕ್ತಾನೆ. ಓಹ್ ಕತ್ತಲು..
ನಾಳೆ ತೆಗೆದರಾಯಿತು ಅಂತ ವಾಪಾಸ್ಸು ಬರ್ತಾನೆ.
ಗುಟಕ್ ಗುಟಕ್..ಕೇಳಿಸ್ತದೆ.
ಇಲ್ಲ ಇಲ್ಲ. ಈಗಲೇ ತೆಗೀತೇನೆ. ಅಡ್ಡಿಲ್ಲ ಚಂದ್ರನ ಬೆಳಕಿದೆ.
ಹಗ್ಗಕ್ಕೇನು ಮಾಡೋಣ?
ಯಾವುದಾದರೂ ಕಾಡುಬಳ್ಳಿ ತರುತ್ತೇನೆ.. ಕಾಡುಬಳ್ಳಿ ಎಳೆದು ಸುತ್ತುತ್ತಾನೆ.
ಬಾವಿ ಮರಕ್ಕೆ ಸುತ್ತುತ್ತಾನೆ. ಬಾವಿಗಿಳಿಯುತ್ತಾನೆ. ಕಲ್ಲು ಜಾರುತ್ತದೆ. ಆದರೂ ಇಳಿಯುತ್ತಾನೆ. ಕೊಡ ಸಿಗುತ್ತದೆ. ಕೊಡ ಹಗ್ಗ ಮೇಲೆ ತಂದು ಇನ್ನೇನು ಬಾವಿಯ ಅಂಚಿಗೆ ಬರುವಾಗ ಬಳ್ಳಿ ತುಂಡಾಗಿ..ಅಯ್ಯೋ.. "ಜಡಲ್....!"
ಅಂತ ನೀರಿಗೆ ಬೀಳ್ತಾನೆ..
ಆ ಸದ್ದಿಗೆ ಅಜ್ಜಿ ವಕ್ರ ವಕ್ರವಾಗಿ ಓಡಿ ಬರ್ತಾಳೆ(ಅವಳ ಕೈಯಲ್ಲಿ ಅರ್ಧ ವೃತ್ತದ ಹಿಡಿಕೆ ಇರುವ ಊರುಗೋಲು ಇರ್ತದೆ)..
ಏನಾಯ್ತೋ..
ಕಾಡು ಬಳ್ಳಿ ಕಟಕ್ ಕಟಕ್
ನೀರಿಗೆ ಬಿದ್ದೆ ಡುಳುಕ್ ಡುಳುಕ್
ಅಯ್ಯೋ ಬಿದ್ದೆಯಾ ಮಗಾ..?
ಇಲ್ಲ, ನೀರೆಷ್ಟಿದೆ ಅಂತ ನೋಡಲು ಹಾರಿದೆ! ನೀನೊಬ್ಬಳು..!
ತಾಳು,ಗಟ್ಟಿ ಹಗ್ಗ ತರ್ತೇನೆ..
ಕೈಗೆ ಏನೋ ಸಿಗುತ್ತದೆ ಎಳೆಯುತ್ತಾಳೆ. ಅವಳಿಗೆ ಕಣ್ಣು ಕಾಣಿಸದು.ಅದು ಹಾವಿನ ಬಾಲ.
ತುಸು ದಪ್ಪ ಇದೆ. ಒಳ್ಳೆಯದೇ ಆಯ್ತು.
ಈಚೆಗೆ,ಹಾವು.."ಅರೇ ಯಾರಪ್ಪಾ ನನ್ನ ಬಾಲಎಳೀತಾ ಇರೋದು..?"
"ಟುಂಯ್‌ಕ್ ಟುಂಯ್‌ಕ್.."
ಅಡ್ಡಿಲ್ಲ. ಒಳ್ಳೆ ಗಟ್ಟಿ ಇದೆ..
ಬಾವಿಯ ಮರಕ್ಕೆ ಸುತ್ತುತ್ತಾಳೆ. ಬಾವಿಗೆ ಎಸೆಯುತ್ತಾಳೆ.. ಬೊಮ್ಮಯ ಮೇಲೆರ್ತಾನೆ.. (ಬಾ ಬಾ ಮೇಲೆ ಬಾ..)
ಕೊಡ ಹಗ್ಗ ಎತ್ತಿ ಮೇಲಕ್ಕೆ ಬರ್ತಾನೆ. ಮೇಲೆ ಬರುವಾಗ ಹಾವು ಬುಸ್ ಅಂತದೆ..
ಅಯ್ಯೋ..
ಅಜ್ಜಿ ಬಾವಿಗೆ ಬೀಳಲಿರುವ ಬೊಮ್ಮಯನನ್ನು ಊರುಗೋಲಿನಿಂದ ಅವನ ಕತ್ತನ್ನು ಎಳೆದುಬಿಡ್ತಾಳೆ.
ಅವನು ಕೊಡ ಹಗ್ಗ ಸಮೇತ ಅಜ್ಜಿ ಮೇಲೆ ಬೀಳ್ತಾನೆ. ಅಜ್ಜಿ ಪಲ್ಟಿ.
ಅಯ್ಯೋ.. ಅಜ್ಜಿ ಓಡು ಓಡು..
ಯಾಕೆ ಓಡೋದು?
ಅಜ್ಜಿ ನೀನು ಕಂಬಕ್ಕೆ ಕಟ್ಟಿದ್ದು ಹಾವು..
ಓ ದೇವರೇ!
ಓಡು ಓಡು .. ನಿಲ್ಲಬೇಡ ಓಡು. ಬೊಮ್ಮಯನ ಕಾಲಿಗೆ ಕೊಡದ ಬಳ್ಳಿ ಸುತ್ತಿಕೊಂಡಿರ್ತದೆ.
ಬೊಮ್ಮಯ ನೋಡುತ್ತಾನೆ. ಅಜ್ಜಿಯ ಸೊಂಟ ಸರಿಯಾಗಿರ್ತದೆ. ನಗುತ್ತಾನೆ. ಅಜ್ಜಿ ನಿಲ್ಲು. ನಿಲ್ಲುತ್ತಾನೆ.
ಅರೇ ಅಜ್ಜಿ ನಿನ್ನ ಸೊಂಟ ಸರಿಯಾಯ್ತ?
ಹೌದಲ್ಲ? ಓಡುವ ಭರದಲ್ಲಿ ನೋವು ಮಾಯ!
ಆದರೆ "ಕುಟುಕ್ ಕುಟುಕ್.."
ಹೆ ಹೆ.. ಇಲ್ಲಿ ನೋಡು.. ಕಾಲನ್ನು ಎತ್ತಿ ನೋಡುತ್ತಾನೆ.
ಹಗ್ಗ ಎಳೆಯುತ್ತಾನೆ..
ಕೊಡದಲ್ಲಿ ತುಸು ನೀರಿದೆ.. ಕುಡಿ. ತಾನೂ ಕುಡಿಯುತ್ತಾನೆ.
.jpg)
Comments
Post a Comment