ಬೊಮ್ಮಯ

 *ಕಾಡಿನಲ್ಲೊಂದು ಮನೆ. ಅಲ್ಲೊಬ್ಬ ಹುಡುಗ. ಹೆಸರು ಬೊಮ್ಮಯ. 

-ಅಜ್ಜೀ ಅಜ್ಜೀ ನಾನು ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದೇನೆ.

-ಮಗಾ ನೀನು ಹೋದ‌ಮೇಲೆ ನನಗೆ ಹಸಿವೆಯಾದರೆ ನಾನು ಕಾಯಲೇ? 

 -ಕಾಯಬೇಡ ಊಟ ಮಾಡಿಬಿಡು.

-ಊಟವಾದ ಮೇಲೆ ನಿದ್ದೆ ಬಂದರೆ?

-ನಿದ್ದೆ ಬಂದರೆ ಚಾಪೆಹಾಸಿ ಮಲಗು.


-ಚಳಿಯಾದರೆ..

-ಅಯ್ಯೋ ಮುದುಕಿ, ಚಳಿಯಾದರೆ ಕಂಬಳಿಯಲ್ಲಿ ಮುದ್ದೆಯಾಗಿ ಮುರುಟಿಕೊಂಡು ಮಲಗು! ನಾನು ಹೋಗುತ್ತೇನೆ.

*ಬೊಮ್ಮಯ ಹೆಗಲಲ್ಲಿ ಕೊಡಲಿ ಹೊತ್ತು ಹೊರಟ. ಕಾಡಿನ ಮಧ್ಯದಲ್ಲಿ ಒಂದು ಒಣಮರ ಕಾಣಿಸಿತು.

-ಆಹಾ, ದೇವರ ದಯೆ. ಈ ಮರ ಒಂದು ತಿಂಗಳ ಕಟ್ಟಿಗೆಗೆ ಸಾಕು. ಈಗಲೇ ಉರುಳಿಸಿಬಿಡುತ್ತೇನೆ.

-ಚಕ್ ಚಕ್ ಚಕ್..

*ಆಗ..

-ಕೀಂ ಕೀಂ..(ಹಕ್ಕಿ) ಅಯ್ಯೋ ಮಾರಾಯನೇ, ಈ ಮರ ಕಡಿಯಬೇಡ. ಇಲ್ಲಿ ನನ್ನ ಗೂಡಿದೆ.

-ಯಾರಮ್ಮ‌ ನೀನು? ಬದಿಗೆ ಸರಿ. ಮರ ನಿನ್ನ ತಲೆಗೆ ಬಿದ್ದೀತು.

-ಅಯ್ಯೋ ಅಣ್ಣಾ ಈ ಮರದ ಗೂಡಲ್ಲಿ 

 ನಿನ್ನೆಯಷ್ಟೇ ಕಣ್ಣುಬಿಟ್ಟ ನನ್ನ ಎರಡು ಪುಟ್ಟ ಮರಿಗಳಿವೆ.

-ಹೌದಾ, ಅವಕ್ಕೆ ಎದ್ದು ಈಚೆ ಬರಲು ಹೇಳು. ಮರ ಬೀಳುವಾಗ ಮನೆಯೂ ಬೀಳುತ್ತದೆ ಅಂತ ಎಬ್ಬಿಸಿ ಕರೆದುಕೊಂಡು ಹೋಗು.

-ಅಣ್ಣಾ. ಅವು ಪುಟ್ಟ‌ಮರಿಗಳು. ಎದ್ದು ಬರಲು ಅವು ಹಾರಲು ಕಲಿತಿಲ್ಲ.

-ಓ  ಮುದ್ದು ಪೆದ್ದ ಹಕ್ಕಿಯೇ, ನೀರಿಗೆ ಬಿದ್ದರೆ ತನ್ನಿಂತಾನೇ ಈಜಲು ಬರುತ್ತದೆ. ಮರ ಬಿದ್ದಾಗ ತನ್ನಿಂತಾನೇ ಹಾರಲು ಕಲಿಯುತ್ತಾವೆ ಬಿಡು.

-ಅಯ್ಯೋ ದೇವರೇ, ಹಾರಲು ಅವುಗಳ ರೆಕ್ಕೆಗಿನ್ನೂ ಶಕ್ತಿ ಬಂದಿಲ್ಲ. 

-ಓಹೋ ಹೌದೇ, ಆದರೆ ನನಗೆ ಕಟ್ಟಿಗೆ ಬೇಕು. ಈ ಮರ ಕಡಿದರೆ ಕಟ್ಟಿಗೆ ಸಿಗುತ್ತದೆ.

 -ಅಪ್ಪಣ್ಣಾ.., ನೀನು ಬೇರೆ ಮರ‌ ಹುಡುಕಿಕೊಳ್ಳಬಾರದೇ, ಇದೇ ಮರವೇ ಆಗಬೇಕೇ?

-ಇದೇ ಮರ ಆಗಬೇಕೂಂತ ಏನೂ ಇಲ್ಲ. ಆದರೆ ಇದು ಆಗಬಹುದು. ಬೇರೆ ಮರ ಹುಡುಕೋದ್ಯಾರಮ್ಮ.‌

ನೀನು ಹುಡುಕಿಕೊಡ್ತೀಯಾ? ಅಲ್ಲದೇ

 ಕತ್ತಲಾಗೋ ಮೊದಲು ಮನೆ ಸೇರಬೇಕು. ಅಲ್ಲಿ ನನ್ನ ಅಜ್ಜಿ ಕಾಯುತ್ತಾ ಇರುತ್ತಾಳೆ. 

-ಓ ಹೌದಾ?

-ಹಾ. ಅವಳಿಗೆ ಕಣ್ಣು ಸರಿಯಾಗಿ ಕಾಣಿಸದು. ಮೊನ್ನೆ ಪಾತ್ರೆ ಎಡವಿ ಹಣೆಗೆ ಪೆಟ್ಟು ಮಾಡಿಕೊಂಡಳು ಬೇರೆ. ಮತ್ತೆ......

-ಆಯ್ತಾಯ್ತು. ನಿನ್ನ ಕತೆ ಇನ್ನೊಮ್ಮೆ ಕೇಳೋಣ. ಈಗ ನಾನು ಬೇರೆ ಮರ ತೋರಿಸಬಲ್ಲೆ. ಬಾ ನನ್ನ‌ ಜೊತೆ.

*ಅವರಿಬ್ಬರೂ ಹೊರಟರು. ಅಲ್ಲಿ..ಒಂದು ದೊಡ್ಡ ಮರ ಕಾಣಿಸಿತು. ಆದರೆ ಅದು ಹಸಿ ಮರ.‌ ಅದರ ಒಂದು ಕೊಂಬೆ ಒಣಗಿತ್ತು.

ಹಕ್ಕಿ‌  ಮರದ ಕಿವಿಯ ಬಳಿ ಹಾರುತ್ತಾ..

-ಮರಜ್ಜಾ ಮರಜ್ಜಾ.. ಮೊನ್ನೆ ನೀನೇನೋ ಹೇಳ್ತಾ ಇದ್ದೆಯಲ್ಲ.‌ ಮರ ಕತ್ತರಿಸುವವರಿದ್ದರೆ ಬರಹೇಳಲು ಹೇಳಿದೆಯಲ್ಲ.‌

-ಹೌದು ಸಿಕ್ಕಿದರೇ?

-ಇಗೋ ಒಬ್ಬರು ಸಿಕ್ಕಿದ್ದಾನೆ. ವಿಚಾರಿಸು. ನಾನಿನ್ನು ಬರಲೇ? ಮಕ್ಕಳಿಗೆ ಹಾಲು‌ ಕುಡಿಸಬೇಕು.

*ಹಕ್ಕಿ ಹಾರಿಹೋಯಿತು

ಮರ: ಏನಪ್ಪಾ?

 ಬೊ- ಹೇಳು, ಮದುಕಪ್ಪಾ.

-ನನ್ನದೊಂದು ಸಮಸ್ಯೆ ನಿವಾರಿಸುವೆಯಾ?

 -ಏನಪ್ಪಾ,ನಿನ್ನ ಅಂಥಾ ಸಮಸ್ಯೆ?

-ನೋಡು ನನ್ನ ಒಂದು ಕೊಂಬೆ ಒಣಗಿ ಕುಂಬಾಗಿದೆ. ಆ ಭಾಗವನ್ನು

ಗೆದ್ದಲು ಹುಳಗಳು ಹಿಡಿದು ಬಹಳ ನೋವು ಕೊಡುತ್ತಿದೆ. ಅದನ್ನು ಕತ್ತರಿಸಿ ನೋವು ನಿವಾರಿಸಬಲ್ಲೆಯ?

* ಬೊಮ್ಮಯ ಯೋಚಿಸಿತ್ತಾನೆ.

ಮರ: ನಿನಗೂ ಕಟ್ಟಿಗೆಯಾಗುತ್ತದೆ.‌ ನನಗೂ ಸಮಸ್ಯೆ ನೀಗುತ್ತದೆ. ಆಗುತ್ತದೋ ನಿನ್ನ ಕೈಲಿ?

- ಎಂತ ಹೇಳುತ್ತಿ ನೀನು? ನನ್ನ ಕೈಲಿ ಆಗದ ಕೆಲಸವೇ ಇಲ್ಲ. ಆದರೆ ಅಜ್ಜಾ, ನಿನಗೆ ಸ್ವಲ್ಪ ನೋವಾಗಬಹುದು ತಡೆದುಕೋ.‌ ಇಂದಿಗೆ ನಿನ್ನ ಸಮಸ್ಯೆ ಮುಗಿದೇಹೋಗಲಿ.

*ಹಾಗೆ ಅವನು ಆ ಕೊಂಬೆಯನ್ನು ಕತ್ತರಿಸಿ ಮನೆಗೆ ಒಯ್ದನು. ಮರದ  ನೋವೂ ನಿವಾರಣೆಯಾಯಿತು.

Comments

Popular posts from this blog

ಮಾತು ಕೇಳದ ಹಲ್ಲಿ

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

ಪೆಂಗಪ್ಪ ಮಂಗಪ್ಪ