ಗೀಜಗನ ಮದುವೆ

ಗೀಜಗಣ್ಣನಿಗೆ ಊರು ತುಂಬಾ ಗೆಳೆಯರು.   ಅವನ‌ ಗೆಳೆಯರಿಗೆ ಅವನೆಂದರೆ ಪ್ರಾಣ. ಆದರೂ ಗೀಜಗಣ್ಣ ಬೇಸರಗೊಂಡಿದ್ದ. ಕಾರಣ ಅವನ ಗೆಳತಿಯರು ಅವನನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ. ಯಾವ ಗೆಳತಿಯೂ,  "ಓ ಗೀಜಗ ನೀನಂದ್ರೆ ನನಗಿಷ್ಟ" ಅನ್ನುತ್ತಿರಲಿಲ್ಲ. ಯಾಕೆಂದರೆ ಗೀಜಗನಿಗೆ ಚಂದದ ಮನೆ ಇರಲಿಲ್ಲ. ಅವನು ಒಂದು ಹಳೆಯ ಮುರುಕು ಗೂಡಿನಲ್ಲಿ ವಾಸವಾಗಿದ್ದ. ಅದು ಅವನ ಅಜ್ಜನೋ ಪಿಜ್ಜನೋ ಕಟ್ಟಿದ ಮನೆಯಾಗಿತ್ತು. ಹತ್ತು ವರುಷದ ಹಿಂದೆ ಕಟ್ಟಿದ್ದ ಹಳೆಯದಾದ ಮನೆ. ಅದು ಮಳೆ ಬಂದರೆ ಸೋರುತ್ತಿತ್ತು. ಗಾಳಿಗೆ ಅದರ ಗೋಡೆಗಳು ಅಲುಗಾಡುತ್ತಿದ್ದವು. ಮಲಗಲು ಬೆಚ್ಚಗಿನ ಜಾಗವೇ ಇರಲಿಲ್ಲ. ಅದಕ್ಕೆ ಅವನು ಬೇಸರಗೊಂಡಿದ್ದ. ಅವನ ಚಪ್ಪೆಮುಖ ನೋಡಿದ ಅವನ ಗೆಳೆಯರು ಅವನಿಗೆ ಆ ಮನೆಯನ್ನು ತುಸು ರಿಪೇರಿ ಮಾಡಿ ಕೊಟ್ಟರು. ತೂತಾದ ಮಾಡು ಮತ್ತು ಗೋಡೆಗೆ ಒಂದಷ್ಟು ಒಣ ಎಲೆ ತಂದು ಮುಚ್ಚಿಸಿಕೊಟ್ಟರು. ಗದ್ದೆಯಿಂದ ನಯವಾದ ಒಂದಷ್ಟು  ಆವೆಮಣ್ಣನ್ನು ಹೊತ್ತುತಂದು ತೇಪೆಹಾಕಿದರು. ಮತ್ತೊಂದಷ್ಟು ಗೆಳೆಯರು  ಬಣ್ಣ ಮಾಡಿಕೊಟ್ಟರು.
ಅವನಿಗೆ ಸ್ವಲ್ಪ ಸಮಾಧಾನವಾಯಿತು. ಮರುದಿನ ಅವನು ತನ್ನ ಗೆಳತಿಯರನ್ನು ಕರೆದುಕೊಂಡು ಬಂದು ಜಂಭದಿಂದ ಮನೆ ತೋರಿಸಿದ. ಆದರೆ ಗೆಳತಿಯರಿಗೆ
ಆ ಮನೆ ಇಷ್ಟವಾಗಲಿಲ್ಲ. ಅವರಿಗೆ ಆ ಮನೆಯಲ್ಲಿ ಸಮಸ್ಯೆ ಕಾಣಿಸುತ್ತಿತ್ತು. "ಈ ಮನೆ ಅದೇ ಹಳೆಯ ಮನೆ. ಏನೂ ಚೆನ್ನಾಗಿಲ್ಲ. ಮಲಗುವ ಕೋಣೆ ಚಿಕ್ಕದು ಮತ್ತು ಕರೀ ಕತ್ತಲು. ಇದರ ಮಾಡಿಗೆ ಬಲವಿಲ್ಲ. ಗೋಡೆ ನೋಡು ಗೆದ್ದಲಗೂಡು" ಅಂತ ಕೊಂಕು ಮಾತಾಡಿ ನಗುತ್ತಾ ಹೋದರು. ಗೀಜಗಣ್ಣನಿಗೆ ತುಂಬಾ ಅಂದರೆ ತುಂಬಾ ಬೇಸರವಾಯಿತು. ಅವಮಾನ ಅನ್ನಿಸಿತು.
ಅವನು ಬಹಳ ಯೋಚಿಸಿದ. 
"ನಾನು ಒಂದು ದೊಡ್ಡ ಗಟ್ಟಿಯಾದ ಚಂದದ ಮನೆ ಕಟ್ಟಲೇಬೇಕು. ಕಟ್ಟದಿದ್ದರೆ ನನ್ನ ಹೆಸರು ಗೀಜಗನಲ್ಲ" ಅಂತ ಹೇಳಿಕೊಂಡ. "ನಾನು ಮಾಡಿಯೇ ಮಾಡುತ್ತೇನೆ" ಅಂತ ದೃಢ ನಿಶ್ಚಯ ಮಾಡಿದ.
ಕೆಲಸ ಶುರು. 

ಎತ್ತಪ್ಪನ ಮನೆಗೆ ಹೋಗಿ ಒಂದು ಕಟ್ಟು ಹುಲ್ಲು ತಂದ. ಜೇಡರಾಯನ‌ ಮನೆಗೆ ಹೋಗಿ ಚೂರು ಅಂಟು  ಕೇಳಿ ತಂದ. ಮರಕುಟ್ಟಪ್ಪನ ಬಳಿಗೆ ಹೋಗಿ ಹೊಸಮನೆಗೆ ಬೇಕಾದ ಸಲಹೆ ಕೇಳಿದ. ಹಾಗೆಯೇ ಹೊಸ ಮನೆಯ ಒಂದು ನಕಾಶೆ ಚಿತ್ರ ಬರೆಸಿಕೊಂಡು ಬಂದ. ನವಿಲಕ್ಕನಿಂದ ಎರಡು ಬಣ್ಣದ ಗರಿಗಳನ್ನು  ಪಡೆದುಕೊಂಡು ಬಂದ. ಮಂಗಪ್ಪನ  ಮನೆಗೆ ಹೋಗಿ ತೆಂಗಿನನಾರು ತಂದ. ಎಲ್ಲವನ್ನೂ ಒಟ್ಟು ಸೇರಿಸಿದ. "ನನ್ನ ಮನೆ ಎಲ್ಲರಿಗಿಂತ ಎತ್ತರದಲ್ಲಿ ಇರಬೇಕು. ಎಲ್ಲರಿಗೂ ಕಾಣುವಂತೆ ಇರಬೇಕು. ಲಕ್ ಲಕಾ ಅಂತ ಹೊಳೆಯುವಂತೆ ಚಂದ ಮನೆ ಕಟ್ಟುತ್ತೇನೆ" ಅಂತ  ಅವನಿಗವನೇ ಹೇಳಿಕೊಂಡ.  ಆಕಾಶಕ್ಕೆ ಹಾರಿದ. ಯಾರೂ ಸುಲಭಕ್ಕೆ ಹಾರಲಾಗದ ಎತ್ತರದ ತೆಂಗಿನಮರವನ್ನು ಹುಡುಕಿದ. ಗಟ್ಟಿಯಾದ ಆದರೆ ಉಯ್ಯಾಲೆಯಂತೆ ತೂಗುವ ತೆಂಗಿನ  ಗರಿಯೊಂದನ್ನು ಆರಿಸಿಕೊಂಡ.
 ರಾತ್ರಿ ಹಗಲೂ ಕೂತು ಗಟ್ಟಿಮುಟ್ಟಾದ ಚಂದದ ಬೆಚ್ಚಗಿನ ಮನೆಯನ್ನು ಅಲ್ಲಿ ಕಟ್ಟತೊಡಗಿದ. ಮನೆ ಕಟ್ಟುವ ಕೆಲಸದಲ್ಲಿ ಅವನಿಗೆ ಅನುಭವ ಇರಲಿಲ್ಲವಾದ್ದರಿಂದ ಮೊದಮೊದಲು ತುಂಬಾ ಕಷ್ಟವಾಗುತ್ತಿತ್ತು. ನಾರುಗಳನ್ನು ಎಳೆದು ಕಟ್ಟುವಾಗ ಕೈಕಾಲಿಗೆಲ್ಲ ಸಿಕ್ಕಿಹಾಕಿಕೊಳ್ಳುತ್ತಿತ್ತು. ಒಮ್ಮೊಮ್ಮೆ ಇಡೀ ಗೂಡಿನ ಸಹಿತ ಕೆಲಕ್ಕೆ ಬೀಳುತ್ತಿದ್ದ. ಆದರೆ ಪ್ರಯತ್ನಿಸುತ್ತಾಹೋದಂತೆ ನಿಧಾನಕ್ಕೆ ಅವನಿಗೆ ಮನೆಕಟ್ಟುವ ತಂತ್ರಗಳೆಲ್ಲ ಅರಿವಾಗುತ್ತಾ ಹೋಯಿತು. 
 ಜೇಡರಾಯನಿಂದ ಕೊಂಡ ಅಂಟುಬೆರೆಸಿದ ತೆಂಗಿನನಾರಿನಿಂದ ಗೋಡೆ ಮಾಡಿದ. ಕಾಟಿಯಪ್ಪನಿಂದ ಕೊಂಡ ಹುಲ್ಲನ್ನು ಮಾಡಿಗೆ ಹೊದೆಸಿದ. ಬಾಗಿಲ ತೋರಣಕ್ಕೆ ನವಿಲಕ್ಕನ ಗರಿಯನ್ನು ಬಳಸಿದ್ದ. ಅವನ ಗೆಳತಿಯಲ್ಲೊಬ್ಬಳಿಗೆ ಇವನು ಚಂದದ ಮನೆ ಕಟ್ಟುವ ವಿಷಯ ತಿಳಿಯಿತು.  ಗೀಜಗಿ ಅಂತ ಅವಳ ಹೆಸರು. ಅವಳೂ ಉಳಿದವವರಿಗ್ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಹೋಗಿ ಮನೆ ನೋಡಿ ಮೆಚ್ಚಿಕೊಂಡು ಬಂದಳು. ಗೀಜಗ ಆ ದಿನವಿಡೀ ಹಾಡು ಹಾಡುತ್ತಾ ಕೆಲಸ ಮಾಡಿದ್ದೇ ಮಾಡಿದ್ದು!

ಕೆಲವೇ ದಿನಗಳಲ್ಲಿ ಸಿದ್ಧವಾದ ಗೀಜಗಣ್ಣನ ಮನೆ ಲಕ ಲಕ ಅಂತ ಹೊಳೆಯತೊಡಗಿತು. ಗೀಜಗನ ಮನೆ ನೋಡಿ
ಅವನ ಗೆಳೆಯರಿಗೆ ಖುಷಿಯಾಯಿತು. ಎಲ್ಲರನ್ನೂ ಗೃಹಪ್ರವೇಶಕ್ಕೆ ಕರೆದ. ಇಡೀ ಕಾಡಿಗೆ ಕಾಡೇ ಮೆಚ್ಚುವಂತೆ ಹೊಸಮನೆಯನ್ನು ತೆರೆದ. ಅವನ ಎಲ್ಲಾ  ಗೆಳತಿಯರೂ ಬಂದು ನೋಡಿದರು. ಅದರಲ್ಲಿ ಅವನ ಪ್ರಿಯ ಗೆಳತಿಯಾದ ಗೀಜಗಿಯೂ ಇದ್ದಳು. ಅವಳಿಗೆ ಆ ಮನೆ ತುಂಬಾ ಇಷ್ಟವಾಯಿತು. 
ಆಕೆ, "ಆಹಾ, ಬಾಗಿಲ ಈ ಸ್ವಾಗತ ತೋರಣ ತುಂಬಾ ಚಂದವಾಗಿದೆ". ಅಂದಳು. ಈ ಗೋಡೆ ಮಾಡು ಗಟ್ಟಿಮುಟ್ಟಾಗಿದೆ. ಈ ಕೋಣೆ ಮಳೆಯಲ್ಲಿ ಬೆಚ್ಚಗೆ, ಬೇಸಗೆಯಲ್ಲಿ ತಂಪಾಗಿರುವಂತೆ ಇದೆ" ಅಂದಳು. ಗೀಜಗ ಖುಷಿಯಾಗಿ ಕೇಳಿದ " ನಿನಗೆ ಮನೆ ಇಷ್ಟವಾಯಿತಾ?"
ಆಕೆಯ ಕುಣಿದಾಡಿದಳು.
"ಮನೆಯೂ ಇಷ್ಟವಾಯಿತು.‌ ಮನೆಯನ್ನು ಕಟ್ಟಿದ ನೀನೂ ಇಷ್ಟವಾದೆ ಅಂತ ಆಕೆ ನಾಚಿಕೊಂಡಳು!
ಮರುದಿನ ಎಲ್ಲರ ಸಮ್ಮುಖದಲ್ಲಿ ಗೀಜಗನಿಗೂ ಗೀಜಗಿಗೂ ಧಾಂಧೂಂ ಅಂತ ಮದುವೆಯಾಯಿತು. ಕುಮಾರಿ ಕೋಗಿಲೆಯ ಹಾಡು, ನವಿಲಿನ‌ ನೃತ್ಯ ಕಾರ್ಯಕ್ರಮದೊಂದಿಗೆ ಮದುವೆ ನೆರವೇರಿತು. ಮಿಂಚುಳ ಮಾಮ ಗೀಜಗನಿಗೆ ಕೊಡುಗೆಯಾಗಿ ಒಂದು ಉಂಗುರ ಕೊಟ್ಟಿದ್ದ. ಗೀಜಗ ತನ್ನ ಹೆಂಡತಿ ಗೀಜಗಿಗೆ ಆ ಉಂಗುರತೊಡಿಸಿದ. ಅದು ರಾತ್ರಿಯಿಡೀ ಲಕಲಕನೆ ಹೊಳೆಯುತ್ತಿತ್ತು!

Comments

Popular posts from this blog

ಮಾತು ಕೇಳದ ಹಲ್ಲಿ

ಮುಳ್ಳು ಹೋಯ್ತು..ಮುಳ್ಳು ಹೋಯ್ತು..ಲಲ್ಲಲಲ್ಲಲಾ.!

ಪೆಂಗಪ್ಪ ಮಂಗಪ್ಪ